ಮಂಗಳೂರು | ಹತ್ಯೆಯಾದ ಯುವಕ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ನಿರ್ದಿಷ್ಟ ಸಾಕ್ಷಿ ಸಿಕ್ಕಿಲ್ಲ: ಅನುಪಮ್ ಅರ್ಗವಾಲ್

ಮಂಗಳೂರು: ನಗರದ ಹೊರವಲಯದ ಕುಡುಪು ಬಳಿ ಕೇರಳ ಮೂಲದ ಮುಸ್ಲಿಮ್ ಯುವಕನ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆಗೀಡಾಗಿದ ಯುವಕ “ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ನಿರ್ದಿಷ್ಟ ಸಾಕ್ಷಿ ಸಿಕ್ಕಿಲ್ಲ” ಎಂದು ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ 20 ಜನರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನಾ ಸ್ಥಳದಲ್ಲಿದ್ದ 15 ಜನರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಸ್ಥಳದಲ್ಲಿದ್ದ ಸಿಸಿ ಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ಹೆಡ್ಕಾನ್ಸ್ಟೇಬಲ್ ಪಿ.ಚಂದ್ರ, ಪಿಸಿ ಯಲ್ಲಾಲಿಂಗ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮಂಗಳೂರು ನಗರ ಹೊರವಲಯದ ಕುಡುಪು ಬಳಿ ಕ್ರಿಕೆಟ್ ಪಂದ್ಯಾಟದ ವೇಳೆ ಕೇರಳ ಮೂಲದ ಅಶ್ರಫ್ ಎಂಬ ಯುವಕನ ಮೇಲೆ 30 ಜನರ ಗುಂಪು ಭೀಕರವಾಗಿ ದಾಳಿ ನಡೆಸಿ ಹತ್ಯೆ ಮಾಡಿತ್ತು. ಹತ್ಯೆಯ ಬಗ್ಗೆ ಚರ್ಚೆ ನಡೆಯುವ ಬದಲು ಘಟನೆಯ ನಂತರ ‘ಪಾಕಿಸ್ತಾನ ಪರ ಘೋಷಣೆ’ ಹಾಕಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ವಿಚಾರವೇ ಹೆಚ್ಚು ಚರ್ಚೆಯಾಯಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಈ ಪ್ರಕರಣ ಸಂಬಂಧ ನೀಡಿರುವ ಹೇಳಿಕೆಗಳು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD