ಮಂಗಳೂರಿನಲ್ಲಿ ಯುವಕನ ಹತ್ಯೆ ಪ್ರಕರಣ: 15 ಮಂದಿಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿದ ಪರಿಣಾಮ ಒಬ್ಬ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿರುವ ಘಟನೆ ಅಡ್ಡೂರು ಕೊಲ್ತಮಜಲು ಎಂಬಲ್ಲಿ ಮಂಗಳವಾರ ನಡೆದಿದೆ.
ಕೊಲ್ತಮಜಲು ಬೆಲ್ಲೂರು ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರ ಅಬ್ದುಲ್ ರಹಿಮಾನ್ ಮೃತಪಟ್ಟ ಯುವಕನಾಗಿದ್ದು, ಕಲಂದರ್ ಶಾಫಿ ಎಂಬ ಯುವಕ ಗಾಯಗೊಂಡಿದ್ದಾನೆ. ಅಬ್ದುಲ್ ರಹಿಮಾನ್ ಅವರು ಇಮ್ತಿಯಾಝ್ ಅವರೊಂದಿಗೆ ತನ್ನ ಪಿಕ್ ಅಪ್ ವಾಹನದಲ್ಲಿ ಅಡ್ಡೂರಿನಿಂದ ಕಲ್ಪನೆ ಸಮೀಪ ಕಾಗುಡ್ಡೆ ಎಂಬಲ್ಲಿ ಮನೆಯೊಂದರ ಬಳಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ. ರಹಿಮಾನ್ ಅವರ ತಲೆಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ವೇಳೆ ರಹಿಮಾನ್ ಜೊತೆಗಿದ್ದ ಕಲಂದರ್ ಶಾಫಿ ಮೇಲೆಯೂ ತಲವಾರಿನಿಂದ ದಾಳಿ ನಡೆಸಲಾಗಿದ್ದು, ಅವರ ಕೈ, ಭುಜಗಳಿಗೆ ಗಂಭೀರ ಗಾಯಗಳಾಗಿವೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
15 ಮಂದಿಯ ವಿರುದ್ಧ ಪ್ರಕರಣ ದಾಖಲು:
ಅಬ್ದುಲ್ ರಹಿಮಾನ್ ಹತ್ಯೆ ಮತ್ತು ಕಲಂದರ್ ಶಾಫಿ ಮೇಲೆ ಕೊಲೆ ಯತ್ನ ಪ್ರಕರಣ ಸಂಬಂಧ ಸ್ಥಳೀಯ ಇಬ್ಬರು ಸೇರಿದಂತೆ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಕ್ ಮತ್ತು ಸುಮಿತ್ ಸೇರಿದಂತೆ ಒಟ್ಟು 15 ಮಂದಿ ವಿರುದ್ಧ ದೂರು ದಾಖಲಾಗಿದ್ದು, ಇವರು ಕೊಲೆಯಾದ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿಗೆ ಪರಿಚಯಸ್ಥರೇ ಆಗಿದ್ದರು ಎಂದು ತಿಳಿದು ಬಂದಿದೆ.
ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಹೊಳೆ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಅನ್ ಲೋಡ್ ಮಾಡುವ ವೇಳೆ ದೀಪಕ್ ಹಾಗೂ ಸುಮಿತ್ ಮತ್ತು ಇತರ 15 ಮಂದಿ ಅಬ್ದುಲ್ ರಹಿಮಾನ್ ಅವರನ್ನು ಪಿಕಪ್ ವಾಹನದಿಂದ ಎಳೆದು ಹಾಕಿ ತಲವಾರು, ಚೂರಿ, ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಡೆಯಲು ಹೋದಾಗ ತನ್ನ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಘಟನೆಯಲ್ಲಿ ಗಾಯಗೊಂಡಿರುವ ಕಲಂದರ್ ಶಾಫಿ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಮಹಮ್ಮದ್ ನಿಸಾರ್ ಎಂಬವರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಡಿವೈಎಸ್ ಪಿ ವಿಜಯಪ್ರಕಾಶ್ ನೇತೃತ್ವದಲ್ಲಿ ಪೊಲೀಸರ 5 ತಂಡ ರಚಿಸಲಾಗಿದೆ. ಮಂಗಳೂರು ಸಿಸಿಬಿ ತಂಡ ಮತ್ತು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD