ಗದಗ: ಮಾನಸಿಕ ಅಸ್ವಸ್ಥ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ವೈದ್ಯ, ನರ್ಸ್ ಸೇರಿದಂತೆ 7 ಜನರ ಬಂಧನ
ಗದಗ: ನಗರದಲ್ಲಿ ಮಾನಸಿಕ ಅಸ್ವಸ್ಥ ಯುವತಿಯನ್ನು ಪುಸಲಾಯಿಸಿ ನಿರಂತರವಾಗಿ ಅತ್ಯಾಚಾರ ಎಸಗಿ, ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ನಡೆಸಿದ ಗದಗ ಮಹಿಳಾ ಠಾಣೆಯ ಪೊಲೀಸರು, ನಾಲ್ವರು ಆರೋಪಿಗಳು ಹಾಗೂ ಅಕ್ರಮ ಗರ್ಭಪಾತಕ್ಕೆ ಸಹಕರಿಸಿದ ವೈದ್ಯ, ನರ್ಸ್ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ್ದಾರೆ.
ಗದಗ ಬೆಟಗೇರಿಯ ಸಿಕಂದರ್ ಬೇಪಾರಿ, ಶಬ್ಬೀರಹ್ಮದ್ ಲಂಗೋಟಿ, ಪ್ರದೀಪ್ ನವಲೇಕರ್ ಹಾಗೂ ಭರತ ಕೊರವರ ಎಂಬ ನಾಲ್ವರು ಆರೋಪಿಗಳು ಯುವತಿಯನ್ನು ನಿರ್ಜನ ಪ್ರದೇಶ ಮತ್ತು ಮನೆಗೆ ಕರೆದೊಯ್ದು ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿ 3 ತಿಂಗಳ ಗರ್ಭಿಣಿಯಾದಾಗ ಕೃತ್ಯ ಪೋಷಕರಿಗೆ ತಿಳಿದಿದೆ. ಈ ವೇಳೆ ಆರೋಪಿಗಳು ಕುಟುಂಬಕ್ಕೆ ಹಣದ ಆಮಿಷವೊಡ್ಡಿ, ಜೀವಬೆದರಿಕೆ ಹಾಕಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ನಂತರ ಲಕ್ಷ್ಮೇಶ್ವರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಆರ್ಎಂಪಿ ವೈದ್ಯ ಡಾ. ನಾಗರಾಜ್ ಕಮತರ, ಶಿಗ್ಲಿ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಹಾಗೂ ಸಂದೀಪ್ ಎಂಬುವವರ ನೆರವಿನಿಂದ ಗರ್ಭಪಾತ ಮಾತ್ರೆ ನೀಡಿ ಅಕ್ರಮ ಗರ್ಭಪಾತ ಮಾಡಿಸಿದ್ದಾರೆ.
ಅಕ್ರಮ ಗರ್ಭಪಾತಕ್ಕೆ ನೆರವು ನೀಡಿದ ಆರೋಪದ ಮೇಲೆ ಗದಗ ಅಂಜುಮನ್ ಅಧ್ಯಕ್ಷ ಅನ್ವರ್ ಬಾಗೇವಾಡಿ, ಕಾರ್ಯದರ್ಶಿ ಅಲ್ತಾಫ್ ಕೊಪ್ಪಳ ಹಾಗೂ ಎಸ್ ಡಿಪಿಐ ಮುಖಂಡ ಬಿಲಾಲ್ ಗೋಕಾವಿ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರೋಹನ್ ಜಗದೀಶ್ ಪ್ರತಿಕ್ರಿಯಿಸಿದ್ದು, “ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದವರು ಅಥವಾ ರಾಜಿ ಪಂಚಾಯಿತಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾರನ್ನೂ ಬಿಡುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಮೆಡಿಕಲ್ ಶಾಪ್ ಮಾಲೀಕ ಹಾಗೂ ನರ್ಸ್ ಆಸ್ಪತ್ರೆ ಜಾಲದ ಬಗ್ಗೆಯೂ ತನಿಖೆ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























