ಅರುಣ್ ಕುಮಾರ್ ಪುತ್ತಿಲಗೆ ಪಕ್ಷ ನಿಷ್ಠೆಯ ಪಾಠ ಮಾಡಿದ ಸಂಸದ ಪ್ರತಾಪ್ ಸಿಂಹ!

ಪುತ್ತೂರು: ಅರುಣ್ ಕುಮಾರ್ ಪುತ್ತಿಲರವರೇ, ನೀವು ಪುತ್ತೂರಲ್ಲಿ ಮಾಡಿದ ಶಕ್ತಿ ಪ್ರದರ್ಶನವನ್ನು ಮೈಸೂರಲ್ಲಿ ಮಾಡುವಷ್ಟು ಶಕ್ತಿ ನನಗೂ ಇದೆ. ಆದರೆ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡಲಿಲ್ಲ. ಏಕೆಂದರೆ ನಮಗೆ ಪಕ್ಷ ನಿಷ್ಠೆ ಮುಖ್ಯ ಎಂದು ಸಂಸದ ಪ್ರತಾಪ್ ಸಿಂಹ ಅರುಣ್ ಕುಮಾರ್ ಪುತ್ತಿಲಗೆ ಪಕ್ಷ ನಿಷ್ಠೆಯ ಪಾಠ ಮಾಡಿದ್ದಾರೆ.
ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾವು ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ, ಪಕ್ಷವೇ ದೊಡ್ಡದು. ನಾವು ವೈಯುಕ್ತಿಕವಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಅಂತ ಹೊರಟಿದ್ದರೆ, ಮೈಸೂರಲ್ಲಿ ನಾನೂ ಶಕ್ತಿ ಪ್ರದರ್ಶನ ಮಾಡುತ್ತಿದೆ. ಸಂಘಟನೆಯೇ ಸೆಟೆದು ನಿಂತು ಒಬ್ಬ ವ್ಯಕ್ತಿಯ ಪರವಾಗಿ ನಿಂತ ಕ್ಷೇತ್ರ ಇದ್ದರೆ ಅದು ಪುತ್ತೂರು. ಅಷ್ಟು ಪ್ರೀತಿ ವಿಶ್ವಾಸವನ್ನ ನೀವು ಕಾರ್ಯಕರ್ತರ ಜೊತೆ ಬೆಳೆಸಿಕೊಂಡಿದ್ದೀರಿ ಎಂದು ಪ್ರತಾಪ್ ಸಿಂಹ ಹೇಳಿದರು.
ನಾವು ಪಾರ್ಟಿ-ಗೀರ್ಟಿಯಾದರೂ ಮಾಡುತ್ತಿದ್ದೇವು. ಆದರೆ ನಳಿನಣ್ಣ ಡೆಲ್ಲಿಗೆ ಬಂದ್ರೂ ಗಂಜಿ ಊಟ, ಬೆಂಗಳೂರಿಗೆ ಬಂದ್ರೂ ಗಂಜಿ ಊಟ. ನಿಮ್ಮ ಜೀವನದಲ್ಲಿ ಒಳ್ಳೆ ಬಟ್ಟೆ ಹಾಕಲಿಲ್ಲ, ಓಡಾಡಲಿಲ್ಲ. ಯಾವಾಗಲೂ ಯಕ್ಷಗಾನ, ನಾಗಮಂಡಲ ಕಾರ್ಯಕ್ರಮಗಳು ಅಂತ ಓಡಾಡುತ್ತಿದ್ದರು. ಒಬ್ಬ ಶಾಸಕ ಸಂಸದನಾಗೋದು ಸುಲಭ ಇಲ್ಲ, ಅವರ ಹೆಂಡತಿ ಮಕ್ಕಳತ್ರ ಅವರ ಕಷ್ಟ ಕೇಳಬೇಕು ಎಂದರು.
2013ರಲ್ಲಿ ಎಲ್ಲಾ ಕಡೆ ಬಿಜೆಪಿ ಖಾಲಿಯಾಗ್ತಾ ಹೋಯ್ತು, ಶಾಸಕರೇ ಇಲ್ಲದ ಹಾಗೆ ಆಗಿ ಹೋಯ್ತು. ಆ ಸಂದರ್ಭದ್ಲಲೂ ನಳಿನ್ ಕುಮಾರ್ ಕಟೀಲ್ ಒಬ್ಬರೇ ನಿಂತು ಓಡಾಡಿದ್ದಾರೆ. ಒಬ್ಬ ಮನುಷ್ಯ ಎಷ್ಟು ಓಡಾಟ ನಡೆಸಬಹುದು ನೀವೇ ಯೋಚನೆ ಮಾಡಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರತಾಪ್ ಸಿಂಹ ಹಾಡಿ ಹೊಗಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth