ಜಿಮ್ ಮುಗಿಸಿ ಮನೆಗೆ ಬಂದ ರಾಷ್ಟ್ರಮಟ್ಟದ ಬಾಡಿ ಬಿಲ್ಡರ್ ಕುಸಿದು ಬಿದ್ದು ಸಾವು
ದಾವಣಗೆರೆ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದ್ದ ದಾವಣಗೆರೆಯ ಯುವ ಬಾಡಿ ಬಿಲ್ಡರ್ ಒಬ್ಬರು ಜಿಮ್ ಮುಗಿಸಿ ಮನೆಗೆ ಮರಳಿದ ಕೆಲವೇ ಹೊತ್ತಿನಲ್ಲಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ದಾವಣಗೆರೆಯ ಕೆ.ಟಿ.ಜಂಬಣ್ಣನಗರದ (ಕೆಟಿಜೆ ನಗರ) ನಿವಾಸಿ ಸುಶೀಲ್ ಕುಮಾರ್ (26) ಮೃತಪಟ್ಟ ಯುವಕ. ಮಂಗಳವಾರ ರಾತ್ರಿ ಸುಮಾರು 8:30ರ ವೇಳೆಗೆ ಜಿಮ್ ಮುಗಿಸಿಕೊಂಡು ಮನೆಗೆ ಬಂದಿದ್ದ ಸುಶೀಲ್ ಕುಮಾರ್, ತನಗೆ ತಲೆ ಸುತ್ತು ಬರುತ್ತಿದೆ ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರಾದರೂ, ದಾರಿ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ರಕ್ತದೊತ್ತಡ ಕಡಿಮೆಯಾಗಿ (ಲೋ ಬಿಪಿ) ಹೃದಯಾಘಾತ ಸಂಭವಿಸಿರುವುದರಿಂದ ಈ ಸಾವು ಸಂಭವಿಸಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಮೃತ ಸುಶೀಲ್ ಕುಮಾರ್ ಅಂತರರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿದ್ದರು ಹಾಗೂ ಸ್ಥಳೀಯ ಯುವಕರಿಗೂ ನಿತ್ಯ ಉಚಿತವಾಗಿ ತರಬೇತಿ ನೀಡುತ್ತಿದ್ದರು. ಮೃತರ ತಾಯಿ ದೇವಮ್ಮ ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದು, ಮಗನ ದಿಢೀರ್ ಸಾವಿನಿಂದ ಕುಟುಂಬ ಹಾಗೂ ಸ್ನೇಹಿತರು ಕಂಗಾಲಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























