ಪೇಜಾವರ ಶ್ರೀ ಮತ್ತೊಮ್ಮೆ ಭಗವದ್ಗೀತೆ ಓದಲಿ: ಎಂಎಲ್ ಸಿ ಮಂಜುನಾಥ ಭಂಡಾರಿ
ಮಂಗಳೂರು: ವಸುದೈವ ಕುಟುಂಬಕಂ ಎಂದು ಸಾರುವ ಪೇಜಾವರ ಶ್ರೀಗಳು, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂದೂ ಯುವಕರಿಗೆ ರಕ್ಷಣೆಯಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ಕೋಮಿನ ಯುವಕರ ತುಷ್ಟೀಕರಣ ಮಾಡುತ್ತಿದ್ದಾರೆ. ಆದ್ದರಿಂದ ಶ್ರೀಗಳು ಮತ್ತೊಮ್ಮೆ ಭಗವದ್ಗೀತೆಯನ್ನು ಓದಬೇಕೆಂದು ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಎಂಎಲ್ ಸಿ ಮಂಜುನಾಥ ಭಂಡಾರಿ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಪೇಜಾವರ ಶ್ರೀಗಳಾದ ವಿಶ್ವೇಶ್ವರ ತೀರ್ಥರು ಉಡುಪಿ ಮಠಕ್ಕೆ ಮುಸ್ಲಿಮರ ಕೊಡುಗೆಯಿದೆ ಎಂದಿದ್ದರು. ಅವರಿಗೆ ಜಾಗವನ್ನು ಕೊಟ್ಟಿದ್ದಾರೆ. ಮಠದಲ್ಲಿ ಇಫ್ತಾರ್ ಕೂಟವನ್ನೂ ಮಾಡಿದ್ದರು. ಅದಕ್ಕೆ ಕೆಲವರು ಟೀಕೆ ಮಾಡಿದಾಗ ಅದನ್ನು ಸಮರ್ಥನೆ ಕೂಡಾ ಮಾಡಿಕೊಂಡಿದ್ದರು.
ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ, ಹಿಂದೂ ಯುವಕರಿಗೆ ರಕ್ಷಣೆ ಇಲ್ಲʼ ಎಂದಿರುವ ಪೇಜಾವರ ಶ್ರೀಗಳಿಗೆ ತಿರುಗೇಟು ನೀಡಿದ ಮಂಜುನಾಥ್ ಭಂಡಾರಿ, ಹಿಂದೂಗಳ ರಕ್ಷಣೆ ಮಾಡುತ್ತೇವೆ ಎಂದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅವರ ಸರ್ಕಾರ ಇರುವಾಗ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದಾದರೆ ಶ್ರೀಗಳು ಅಮಿತ್ ಶಾ ಮೋದಿಯವರ ರಾಜೀನಾಮೆ ಕೇಳಲಿ. ಪೇಜಾವರ ಶ್ರೀಗಳು ಮತ್ತೊಮ್ಮೆ ಭಗವದ್ಗೀತೆ ಓದಬೇಕು ಎಂದು ಮನವಿ ಮಾಡುತ್ತೇನೆ. ಕ್ಷುಲ್ಲಕ ಹೇಳಿಕೆ ನೀಡುವುದು ಹಾಗೂ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.
ಸುಹಾಸ್ ಶೆಟ್ಟಿ ಹಿಂದೂ ನಾಯಕನಾಗಿದ್ದರೆ ಆತನ ಮೇಲೆ ರೌಡಿಶೀಟರ್ ತೆರೆಯಲು ಬಿಜೆಪಿ ಸರ್ಕಾರ ಅವಕಾಶ ಕೊಟ್ಟಿದ್ಯಾಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರ್ಕಾರವೇ ರೌಡಿಶೀಟರ್ ತೆರೆದು ಈಗ ಆತನಿಗೆ ಹಿಂದೂ ನಾಯಕನ ಪಟ್ಟ ಕಟ್ಟಿದ್ದಾರೆ. ಸುಹಾಸ್ ಶೆಟ್ಟಿ ಮೇಲೆ ಐದು ಕ್ರಿಮಿನಲ್ ಪ್ರಕರಣಗಳಿವೆ. ಕೀರ್ತಿ ಎಂಬ ಹಿಂದೂ ಯುವಕನನ್ನು ಕೊಂದಿರುವ ಕೇಸ್ ಕೂಡ ಇದೆ. ಕೊಲೆಯಾದ ದಲಿತ ಯುವಕ ಹಿಂದೂ ಅಲ್ಲವೇ? ಹಿಂದೂಗಳನ್ನು ಕೊಂದವನನ್ನು ಹಿಂದೂ ಕಾರ್ಯಕರ್ತ ಎಂದು ವೈಭವೀಕರಿಸುವುದು ಸರಿಯಲ್ಲ. ಬಿಜೆಪಿಯವರು ಕೊಲೆಗಳಾಗುವುದನ್ನು ಕಾಯುತ್ತಿರುತ್ತಾರೆ. ಅಧಿಕಾರ ದಾಹಕ್ಕಾಗಿ ಕೋಮು ಗಲಾಟೆಗಳಿಗೆ ಪ್ರಚೋದನೆ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























