ರಕ್ತದ ಮಡುವಿನಲ್ಲಿ ಪೈಲಟ್: ವಿಮಾನ ಲ್ಯಾಂಡ್ ಮಾಡಿದ ಪ್ಲಂಬರ್, ದಂತವೈದ್ಯ!
ನವದೆಹಲಿ/ಜೆರುಸಲೇಮ್: ಆಕಾಶ ಮಾರ್ಗದಲ್ಲೇ ಸಾವಿನ ನೆರಳಿನಾಳದಲ್ಲಿ ಸಿಲುಕಿದ್ದ ವಿಮಾನವೊಂದು ಪೈಲಟ್‌ಗಳ ಅಚ್ಚರಿಯ ಸಂಘರ್ಷ, ಕಾಕ್ ಪಿಟ್ ಒಳಗೆ ನಡೆದ ರಕ್ತಸಿಕ್ತ ಹೋರಾಟ ಹಾಗೂ ಸಹ ಪ್ರಯಾಣಿಕರ ಅಸಾಧಾರಣ ಸಮಯಪ್ರಜ್ಞೆಯಿಂದ ಪತನದಂಚಿನಿಂದ ಪಾರಾದ ರೋಚಕ ಹಾಗೂ ಮೈವಿಡುಕರಿಸುವ ವಿಚಾರವು ತಡವಾಗಿ ಜಾಗತಿಕ ಮಟ್ಟದಲ್ಲಿ ಬೆಳಕಿಗೆ ಬಂದಿದೆ. ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಈ ಅದ್ಭುತ ಸಾಹಸಗಾಥೆಯ ಪ್ರಮುಖ ರೂವಾರಿಯಾಗಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹೊರಹೊಮ್ಮಿದ್ದು, ಇಡೀ ವಿಶ್ವವೇ ಅವರ ಸಾಹಸವನ್ನು ಕೊಂಡಾಡುತ್ತಿದೆ.
ಕಾಕ್ ಪಿಟ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾರತೀಯ ಪೈಲಟ್: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಎಫ್ ಜೆ1073 ವಿಮಾನದ ಕಾಕ್‌ಪಿಟ್ ಒಳಗೆಯೇ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ಸಹ ಪೈಲಟ್ ನಡುವೆ ತೀವ್ರ ಸ್ವರೂಪದ ಸಂಘರ್ಷ ಏರ್ಪಟ್ಟಿತ್ತು. ಓಮನ್ ಮೂಲದವರೆಂದು ವರದಿಯಾಗಿರುವ ಸಹ ಪೈಲಟ್, ಹಠಾತ್ ದಾಳಿ ನಡೆಸಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಭೀಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸ್ಮಿತ್ ಮಚ್ಚರ್ ಕಾಕ್ ಪಿಟ್ ನೆಲದ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿ ಕುಸಿದುಬಿದ್ದರು. ವಿಮಾನದ ಇಬ್ಬರೂ ಪೈಲಟ್‌ಗಳು ಈ ಘರ್ಷಣೆಯಲ್ಲಿ ಗಾಯಗೊಂಡಿದ್ದರು ಎಂದು ವರದಿಯಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರೂ, ಪ್ರಜ್ಞೆ ತಪ್ಪುವ ಅಂಚಿನಲ್ಲಿದ್ದ ಮಚ್ಚರ್ ತಮ್ಮ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಕಾಕ್‌ಪಿಟ್ ಬಾಗಿಲಿನ ಬಿಡುಗಡೆ ವ್ಯವಸ್ಥೆಯನ್ನು ಒತ್ತುವ ಮೂಲಕ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಘರ್ಷಣೆಯ ವೇಳೆ ವಿಮಾನವು ಕೇವಲ 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಸುಮಾರು 14 ಸಾವಿರ ಅಡಿಗಳಷ್ಟು ಕೆಳಮುಖವಾಗಿ ತೀವ್ರವಾಗಿ ಕುಸಿದಿತ್ತು ಎಂದು ಇಸ್ರೇಲಿ ಅಧಿಕಾರಿಗಳು ಮಾಹಿತಿ ನೀಡಿದ್ದು, ವಿಮಾನದ ಬಾಲ ಭಾಗದ ರಡ್ಡರ್‌ಗೆ ಭಾರೀ ಹಾನಿಯಾಗಿತ್ತು.
ಪ್ಲಂಬರ್ ಮತ್ತು ದಂತವೈದ್ಯರ ಕೈಗೆ ವಿಮಾನದ ನಿಯಂತ್ರಣ:
ಈ ಭಯಾನಕ ಘಟನೆಯ ನಡುವೆಯೇ ಪತನದಂಚಿನಲ್ಲಿದ್ದ ವಿಮಾನವನ್ನು ಪ್ಲಂಬರ್, ದಂತವೈದ್ಯರು ಹಾಗೂ ಇತರ ಸಹ ಪ್ರಯಾಣಿಕರು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಂಚಿಕೊಂಡಿರುವ ಅಧಿಕೃತ ಮಾಹಿತಿಯಂತೆ, ಕಾಕ್‌ಪಿಟ್‌ಗೆ ಪ್ರವೇಶಿಸಿದ ಪ್ರಯಾಣಿಕರಲ್ಲಿ ಯಾನಿವ್ ಹಯೂನ್ ಎಂಬ ಪ್ಲಂಬರ್ ಕೂಡ ಇದ್ದರು. ಆರಂಭದಲ್ಲಿ ತೀವ್ರವಾಗಿ ಕೆಳಗೆ ಕುಸಿಯುತ್ತಿದ್ದ ವಿಮಾನದ ಹ್ಯಾಂಡಲ್‌ಗಳನ್ನು ಹಿಂದಕ್ಕೆ ಎಳೆಯುವ ಮೂಲಕ ಹಯೂನ್ ಅದನ್ನು ನಿಯಂತ್ರಿಸಲು ಮುಂದಾದರು. ತಾವು ಟಿವಿ ಕಾರ್ಯಕ್ರಮಗಳಲ್ಲಿ ನೋಡಿದ್ದ ರೀತಿಯಲ್ಲೇ ಮಾಡಿರುವುದಾಗಿ ಅವರು ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದಂತ ವೈದ್ಯ ಡಾ. ಶೋಟಾ ಮುಸಾವ್ ಕೂಡ ಕಾಕ್‌ಪಿಟ್‌ಗೆ ಧಾವಿಸಿ ಬಂದವರಾಗಿದ್ದು, ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ಕಳೆದುಕೊಳ್ಳುತ್ತಿದ್ದ ಸ್ಮಿತ್ ಮಚ್ಚರ್ ಅವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು ಎಂದು ವಿವರಿಸಿದ್ದಾರೆ. ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಸಾವ್ ಕೂಡ ನೆರವಾಗಿದ್ದು, ಹೆಡ್‌ಫೋನ್‌ಗಳ ತಂತಿ ಹಾಗೂ ಪ್ಲಾಸ್ಟಿಕ್ ಜಿಪ್ ಟೈಗಳ ಸಹಾಯದಿಂದ ಆತನನ್ನು ಕಟ್ಟಿಹಾಕಲಾಯಿತು. ಇದರ ಬಳಿಕ ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ರಿಸರ್ವ್ ಪೈಲಟ್‌ಗಳು ತಕ್ಷಣವೇ ಕಾಕ್‌ಪಿಟ್‌ಗೆ ಪ್ರವೇಶಿಸಿ ವಿಮಾನವನ್ನು ಸಂಪೂರ್ಣ ಸ್ಥಿರಗೊಳಿಸಿ, ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೆಚ್ಚುಗೆ:
ಸಿಬಿಎಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ವೀರತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ಅಸಾಧಾರಣ ವೀರತೆಯಾಗಿದ್ದು, ತಾನು ವಿಶೇಷ ಪಡೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರೂ ಇಂತಹ ರೋಚಕ ಘಟನೆಯನ್ನು ಹಿಂದೆಂದೂ ಕಂಡಿಲ್ಲ ಎಂದು ನೆತನ್ಯಾಹು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಮಿತ್ ಮಚ್ಚರ್ ಅವರ ಛಲ ಮತ್ತು ಬಾಗಿಲು ತೆರೆಯುವ ಸಮಯಪ್ರಜ್ಞೆಯಿಂದಾಗಿ ‘9/11 ಮಾದರಿಯ ಮತ್ತೊಂದು ಭೀಕರ ದುರಂತ ತಪ್ಪಿದೆ’ ಎಂದು ಅವರು ಬಣ್ಣಿಸಿದ್ದಾರೆ. ವಿಮಾನಯಾನ ತಜ್ಞರಾದ ಸ್ಟೀವ್ ಅರೋಯೊ ಹಾಗೂ ಜೆಫ್ ಗುಝೆಟ್ಟಿ ಕೂಡ ವಿಮಾನವನ್ನು ಮರುಸ್ಥಿರಗೊಳಿಸಲು ಸಾಕಷ್ಟು ಎತ್ತರ ಉಳಿದಿದ್ದೇ ಅದೃಷ್ಟವಾಯಿತು ಮತ್ತು ಮಚ್ಚರ್ ಅವರ ಸಾಹಸವೇ ಎಲ್ಲರ ಜೀವ ಉಳಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಾಯಗೊಂಡ ಸ್ಮಿತ್ ಮಚ್ಚರ್ ಅವರು ಯುಎಇ ಮೂಲದ ಫ್ಲೈದುಬೈ ಸಂಸ್ಥೆಯಲ್ಲಿ ಡೈರೆಕ್ಟ್ ಎಂಟ್ರಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಒಟ್ಟು 13 ವರ್ಷಗಳ ವಾಣಿಜ್ಯ ವಿಮಾನಯಾನ ಅನುಭವವಿದೆ ಹಾಗೂ ಸುಮಾರು 9,750 ಗಂಟೆಗಳ ಕಾಲ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ಫ್ಲೈದುಬೈ ಸೇರುವ ಮೊದಲು ಅವರು ಸ್ಪೈಸ್‌ಜೆಟ್‌ನಲ್ಲಿ 11 ವರ್ಷಗಳ ಕಾಲ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದರು. ಮರಣದಂಚಿನಿಂದ ಪಾರಾಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಇದೀಗ ಸಂಪೂರ್ಣ ಪ್ರಾಣಾಪಾಯದಿಂದ ಪಾರಾಗಿದ್ದು, ತಮ್ಮ ಆರೋಗ್ಯದ ಕುರಿತು ಜಗತ್ತಿನಾದ್ಯಂತ ಜನರು ಪ್ರಾರ್ಥಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಹಿತೈಷಿಗಳು ಹಾಗೂ ಬೆಂಬಲಿಗರೊಂದಿಗೆ ಮಾತನಾಡಲು ಹೊಸದಾಗಿ ಎಕ್ಸ್ ಖಾತೆಯನ್ನು ಆರಂಭಿಸಿರುವ ಅವರು ತಮ್ಮ ಮೊದಲ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಜೊತೆ ನಿಂತು ಬೆಂಬಲ ನೀಡಿದ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಮ್ಮ ಆರೋಗ್ಯ ಈಗ ಸ್ಥಿರವಾಗಿದ್ದು ಉತ್ತಮವಾಗಿ ಚೇತರಿಸಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಗಂಭೀರ ಘಟನೆಯ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಫ್ಲೈದುಬೈ ಸಂಸ್ಥೆಯು ಇಸ್ರೇಲ್‌ಗೆ ಮತ್ತು ಅಲ್ಲಿಂದ ಬರುವ ತಮ್ಮ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.




























