ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಜೊತೆ ಮಾತನಾಡಿದ ಪ್ರಧಾನಿ ಮೋದಿ: ಸಾಹಸವನ್ನು ಕೊಂಡಾಡಿದ ನರೇಂದ್ರ ಮೋದಿ
ನವದೆಹಲಿ: ದುಬೈನಿಂದ ಟೆಲ್ ಅವೀವ್ ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಮತ್ತು ಹಿಂಸಾತ್ಮಕ ಘಟನೆಯನ್ನು ಸಮರ್ಥವಾಗಿ ವಿಫಲಗೊಳಿಸಿ, 170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Captain Smit Machchhar) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕರೆಯ ಮೂಲಕ ಮಾತನಾಡಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಅವರು ತೋರಿದ ಸಾಹಸ, ಧೈರ್ಯ ಹಾಗೂ ಸಮಯಪ್ರಜ್ಞೆಯನ್ನು ಪ್ರಧಾನಿ ಮೋದಿ ಬಹುವಾಗಿ ಶ್ಲಾಘಿಸಿದ್ದಾರೆ.
ಪ್ರಸ್ತುತ ಯುಎಇಯ (UAE) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಪ್ರಧಾನಿ ಮೋದಿ ಅವರ ಕರೆ ಸ್ವೀಕರಿಸಿದಾಗ ಭಾವುಕರಾದರು. ಪ್ರಧಾನಿಯವರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಸಿಗುತ್ತದೆ ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂದ ಅವರು, ಮೋದಿ ತಮ್ಮ “ಅತ್ಯಂತ ದೊಡ್ಡ ಆದರ್ಶ” ಎಂದು ತಿಳಿಸಿದರು.
ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ: ಮಚ್ಚರ್
ವಿಮಾನ ಹಾರಾಟದ ನಡುವೆ ತಮಗAದ ಅನುಭವ ಹಾಗೂ ಆ ನಿರ್ಣಾಯಕ ದಿನದ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ವಿವರಿಸಿದ ಕ್ಯಾಪ್ಟನ್ ಮಚ್ಚರ್, ತಮಗೆ ಕಷ್ಟದ ಸಮಯ ಎದುರಾದಾಗಲೆಲ್ಲಾ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದರು. “ಬುಧವಾರದ ಆ ಸವಾಲಿನ ಪರಿಸ್ಥಿತಿಯಲ್ಲೂ ನಾನು ಕೇವಲ ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದೆ. ಇಂದು ನಿಮ್ಮ ಒಂದು ಕರೆಯು ನನಗೆ ಅಪಾರ ಹೆಮ್ಮೆ ಮತ್ತು ಧೈರ್ಯವನ್ನು ತಂದಿದೆ” ಎಂದು ಅವರು ತಿಳಿಸಿದರು.
ಪ್ರಧಾನಿ ಮೋದಿಯಿಂದ ಪ್ರಶಂಸೆ:
ಕ್ಯಾಪ್ಟನ್ ಸ್ಮಿತ್ ಅವರ ಸಂಯಮ ಮತ್ತು ತ್ವರಿತ ನಿರ್ಧಾರವನ್ನು ಕೊಂಡಾಡಿದ ಪ್ರಧಾನಿ ಮೋದಿ, “ಭಾರತೀಯರು ಎಂದಿಗೂ ಇತರರ ಜೀವ ಕಸಿದುಕೊಳ್ಳುವವರಲ್ಲ, ಬದಲಾಗಿ ಇತರರ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಡುವವರು ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ. ಇಡೀ ದೇಶವೇ ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದೆ” ಎಂದು ಹೇಳಿದರು. ಇದೇ ವೇಳೆ, ಸ್ಮಿತ್ ಮಚ್ಚರ್ ಅವರ ತಾಯಿ ಗೀತಾ ಬೆನ್ ಅವರು ತಮ್ಮ ಮಗನಿಗೆ ಭಗವದ್ಗೀತೆಯ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ನೀಡಿ ಬೆಳೆಸಿದ್ದಾರೆ ಎಂದು ಪ್ರಶಂಸಿಸಿದರು.
ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಿದರು. ಮಚ್ಚರ್ ಅವರ ಆರೋಗ್ಯ ಸ್ಥಿರವಾಗಿದ್ದು, ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಮನೋಸ್ಥೈರ್ಯ ಹಾಗೂ ನಗುಮುಖದ ಧೈರ್ಯ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ರಾಯಭಾರಿ ತಿಳಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.




























