AI ಬಳಸಿ ನಕಲಿ ಹಾಲ್‌ ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್ - Mahanayaka

AI ಬಳಸಿ ನಕಲಿ ಹಾಲ್‌ ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್

arrest
01/10/2026

ಮಂಗಳೂರು/ಕಡಬ:  ಸಿವಿಲ್ ಪೊಲೀಸ್ ಕಾನ್ಸ್‌’ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ನಕಲಿ ಪ್ರವೇಶ ಪತ್ರ (Hall Ticket) ಸೃಷ್ಟಿಸಿ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಕಡಬ ಮೂಲದ ಯುವಕನೊಬ್ಬನನ್ನು ಮಂಗಳೂರು ನಗರದ ಬರ್ಕೆ ಠಾಣಾ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಬಂಧಿತನನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ಮನೆ ನಿವಾಸಿ ಯಜ್ಞೇಶ್ ಬಿ.ಜೆ. ರೈ (22) ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಿವಿಲ್ ಪೊಲೀಸ್ ಕಾನ್ಸ್‌ಸ್ಟೇಬಲ್ ನೇಮಕಾತಿ–2026ರ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ (ET&PST) ಪರೀಕ್ಷೆಯು ಸೆ.28ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಈ ವೇಳೆ ಪರೀಕ್ಷಾ ಕೇಂದ್ರದ ನೋಂದಣಿ ಡೆಸ್ಕ್‌ನಲ್ಲಿ ಸಿಬ್ಬಂದಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು.

ಆರೋಪಿ ಯಜ್ಞೇಶ್ ರೈ ತನ್ನ ಮೊಬೈಲ್‌ನಲ್ಲಿನ ಪ್ರವೇಶ ಪತ್ರವನ್ನು ಹಾಜರುಪಡಿಸಿದ್ದನು. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಒದಗಿಸಿದ್ದ ತಂತ್ರಾಂಶದಲ್ಲಿ ವಿವರಗಳನ್ನು ಪರಿಶೀಲಿಸಿದಾಗ, 1:5 ಅರ್ಹತಾ ಪಟ್ಟಿಯಲ್ಲಿ ಯಜ್ಞೇಶ್ ಹೆಸರಾಗಲಿ ಅಥವಾ ಸಂಬಂಧಿತ ಅರ್ಜಿ ಸಂಖ್ಯೆಯಾಗಲಿ ಕಂಡುಬಂದಿಲ್ಲ. ಇದರಿಂದ ಅನುಮಾನಗೊಂಡ ಪರೀಕ್ಷಾ ಸಿಬ್ಬಂದಿ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಪ್ರವೇಶ ಪತ್ರವು ನಕಲಿ ಎಂಬುದು ಬೆಳಕಿಗೆ ಬಂದಿದೆ. ತಕ್ಷಣವೇ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿರುವಂತೆ, ಆರೋಪಿ ಯಜ್ಞೇಶ್ ಸಿವಿಲ್ ಪೊಲೀಸ್ ಕಾನ್ಸ್‌ಸ್ಟೇಬಲ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಲಿಲ್ಲ. ಆದರೂ ದೈಹಿಕ ಪರೀಕ್ಷೆಗೆ ಹೇಗಾದರೂ ಮಾಡಿ ಹಾಜರಾಗುವ ಉದ್ದೇಶದಿಂದ, ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್‌ಟಿಕೆಟ್ ಪಡೆದುಕೊಂಡಿದ್ದನು. ಬಳಿಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಹಾಗೂ ಡಿಜಿಟಲ್ ಎಡಿಟಿಂಗ್ ವಿಧಾನ ಬಳಸಿ ಆ ಹಾಲ್‌ಟಿಕೆಟ್‌ನಲ್ಲಿದ್ದ ಹೆಸರು ಮತ್ತು ಇತರೆ ವಿವರಗಳನ್ನು ಬದಲಾಯಿಸಿ, ತನ್ನದೇ ಹೆಸರಿನ ನಕಲಿ ಹಾಲ್‌ ಟಿಕೆಟ್ ಸಿದ್ಧಪಡಿಸಿಕೊಂಡು ವಂಚನೆಗೆ ಯತ್ನಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಲು ಬಳಸಿದ ಡಿಜಿಟಲ್ ಪುರಾವೆಗಳು ಹಾಗೂ ಎಡಿಟಿಂಗ್ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಗಳು ಪತ್ತೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)–2023ರ ಕಲಂ 336(1), 336(3) ಹಾಗೂ 318(4)ರ ಅಡಿ ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.

ನಕಲಿ ಹಾಲ್‌ ಟಿಕೆಟ್‌ನ ಪ್ರಿಂಟ್‌ ಔಟ್ ಎಲ್ಲಿ ಪಡೆಯಲಾಗಿದೆ ಎಂಬುದನ್ನು ಪತ್ತೆಹಚ್ಚಲು ಬರ್ಕೆ ಠಾಣೆಯ ತನಿಖಾ ತಂಡವು ಕಡಬಕ್ಕೆ ತೆರಳಿ ಸ್ಥಳೀಯ ಸೈಬರ್/ಜೆರಾಕ್ಸ್ ಅಂಗಡಿಗೆ ಭೇಟಿ ನೀಡಿ ಮಹಜರು ನಡೆಸಿದೆ. ಈ ಕೃತ್ಯದಲ್ಲಿ ಇನ್ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇತ್ತೀಚಿನ ಸುದ್ದಿ

Suspected Malware | Cloudflare

Warning

Suspected Malware

This website has been reported for potentially distributing malware.

Malware is malicious software created to intentionally disrupt the normal operations of a device.

Learn More