ಬಿಎಸ್‌ ಪಿ ಸಂಸ್ಥಾಪಕ ಕಾನ್ಶೀರಾಮ್ ಅವರಿಗೆ ಭಾರತ ರತ್ನ: ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

kanshi ram
16/03/2026

ಚಂಡೀಗಢ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸ್ಥಾಪಕ ಕಾನ್ಶೀರಾಮ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಪಂಜಾಬ್ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಆದರೆ, ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಕಾಂಗ್ರೆಸ್ ತಂದಿದ್ದ ಪ್ರಸ್ತಾವನೆಯನ್ನು ಸ್ಪೀಕರ್ ನಿರಾಕರಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಬಜೆಟ್ ಅಧಿವೇಶನದ ಕೊನೆಯ ದಿನದಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಈ ನಿರ್ಣಯವನ್ನು ಮಂಡಿಸಿದರು. “ಬಾಬು ಕಾನ್ಶೀರಾಮ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತವನ್ನು ಮನೆಮನೆಗೆ ತಲುಪಿಸುವಲ್ಲಿ ಮತ್ತು ಸಾಮಾಜಿಕ ಸಮಾನತೆಗಾಗಿ ಶ್ರಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಯಾವುದೇ ಆಸ್ತಿ ಅಥವಾ ಬ್ಯಾಂಕ್ ಖಾತೆ ಇಲ್ಲದೆ ಬದುಕಿದ ಪ್ರಾಮಾಣಿಕ ನಾಯಕ” ಎಂದು ಚೀಮಾ ಶ್ಲಾಘಿಸಿದರು. ಆಮ್ ಆದ್ಮಿ ಪಕ್ಷ (AAP) ತಂದ ಈ ನಿರ್ಣಯಕ್ಕೆ ಕಾಂಗ್ರೆಸ್ ಮತ್ತು ಬಿಎಸ್‌ ಪಿ ಶಾಸಕರು ಬೆಂಬಲ ಸೂಚಿಸಿದರು.

ಕಾನ್ಶೀರಾಮ್ ಅವರ ನಿರ್ಣಯ ಅಂಗೀಕಾರವಾದ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಭಗತ್ ಸಿಂಗ್ ಅವರಿಗೂ ಮರಣೋತ್ತರವಾಗಿ ಭಾರತ ರತ್ನ ನೀಡುವಂತೆ ಒತ್ತಾಯಿಸಿ ನಿರ್ಣಯ ಮಂಡಿಸಲು ಅನುಮತಿ ಕೋರಿದರು. ಆದರೆ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಇದಕ್ಕೆ ಅವಕಾಶ ನೀಡಲು ನಿರಾಕರಿಸಿದರು.

ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು, “ಎಎಪಿ ಸರ್ಕಾರವು ಯಾವಾಗಲೂ ಭಗತ್ ಸಿಂಗ್ ಅವರ ಹೆಸರನ್ನು ಜಪಿಸುತ್ತದೆ ಮತ್ತು ಅವರ ಫೋಟೋಗಳನ್ನು ಕಚೇರಿಗಳಲ್ಲಿ ಹಾಕಿಕೊಳ್ಳುತ್ತದೆ. ಆದರೆ ಅವರಿಗೆ ದೇಶದ ಅತ್ಯುನ್ನತ ಗೌರವ ನೀಡುವ ಪ್ರಸ್ತಾವನೆ ಬಂದಾಗ ಮಾತ್ರ ಹಿಂದೆ ಸರಿಯುತ್ತಿದೆ” ಎಂದು ಟೀಕಿಸಿದರು. ಇದು ಎಎಪಿ ಸರ್ಕಾರದ “ಹೇಳಿಕೆ ಮತ್ತು ನಡವಳಿಕೆ” ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಬಾಜ್ವಾ ಕಿಡಿಕಾರಿದರು.

ಕಾನ್ಶೀರಾಮ್ ಅವರ ಸ್ಮರಣಾರ್ಥವಾಗಿ ಅವರ ಜನ್ಮಸ್ಥಳವಾದ ರೋಪರ್ ಜಿಲ್ಲೆಯ ಖವಾಸ್‌ಪುರ ಗ್ರಾಮದಲ್ಲಿರುವ ಶಾಲೆಯನ್ನು ಮೇಲ್ದರ್ಜೆಗೇರಿಸಲು ಮತ್ತು ಅಲ್ಲಿ ಗ್ರಂಥಾಲಯ ಹಾಗೂ ಸುಸಜ್ಜಿತ ಸಭಾಂಗಣ ನಿರ್ಮಿಸಲು 2 ಕೋಟಿ ರೂ. ಅನುದಾನ ನೀಡುವುದಾಗಿ ಪಂಜಾಬ್ ಸರ್ಕಾರ ಘೋಷಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version