5:52 PM Thursday 16 - October 2025

ಚಳಿಯಲ್ಲಿ ನಡುಗುತ್ತಾ ಮಲಗಿದ್ದ ನಿರಾಶ್ರಿತರಿಗೆ ಬೆಡ್ ಶೀಟ್ ನೀಡಿ ಮಾನವೀಯತೆ ಮೆರೆದ ಪೊಲೀಸರು!

police
17/06/2021

ಬೆಂಗಳೂರು: ಲಾಠಿ ಹಿಡಿಯುವ ಪೊಲೀಸರ ಹೂವಿನಂತಹ ಮನಸ್ಸು, ಬಹುತೇಕ ಬಾರಿ ಜನರಿಗೆ ಅರ್ಥವೇ ಆಗುವುದಿಲ್ಲ. ಬೆಂಗಳೂರು ನಗರದ ಪಶ್ಚಿಮ ವಿಭಾಗದ ಪೊಲೀಸರು ಮಾಡಿರುವ ಕಾರ್ಯ ಇದೀಗ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಒಂದೆಡೆ ಲಾಕ್ ಡೌನ್, ಇನ್ನೊಂದೆಡೆ ಮಳೆಯಿಂದ ತತ್ತರಿಸಿರುವ ಭಿಕ್ಷಕರ ಮೇಲೆ ಪೊಲೀಸರು ಕರುಣೆ ತೋರಿಸಿದ್ದು,  ರಾತ್ರಿ ವೇಳೆಯಲ್ಲಿ ಚಳಿಯಲ್ಲಿ ನಡುಗುತ್ತಾ, ರಸ್ತೆ ಬದಿಯಲ್ಲಿ ಮಲಗಿದ್ದ 100ಕ್ಕೂ ಅಧಿಕ ಭಿಕ್ಷುಕರಿಗೆ, ನಿರ್ಗತಿಕರಿಗೆ ಡಿಸಿಪಿ ಸಂಜೀವ ಪಾಟೀಲ್ ನೇತೃತ್ವದಲ್ಲಿ  ಬೆಡ್ ಶೀಟ್ ವಿತರಣೆ ಮಾಡಲಾಗಿದೆ.

ಕೆ.ಆರ್.ಮಾರ್ಕೆಟ್ ಮೆಟ್ರೋ ಸ್ಟೇಷನ್ ಬಳಿ ಹಾಗೂ ಮಾರ್ಕೆಟ್ ಫ್ಲೈಓವರ್ ಕೆಳಗಿನ ಫುಟ್ಪಾತ್ ನಲ್ಲಿ ವಸತಿ ಸೌಲಭ್ಯವಿಲ್ಲದೇ ಮಲಗಿದ್ದ ಭಿಕ್ಷುಕರಿಗೆ ಬೆಡ್ ಶೀಟ್ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಪ್ರತಿ ಜಿಲ್ಲೆಗಳಲ್ಲಿಯೂ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ವಸತಿ ಸೌಲಭ್ಯಗಳನ್ನು ಒದಗಿಸುವ ಕ್ರಮವನ್ನು ಸರ್ಕಾರ ಕೈಗೊಂಡಿದ್ದರೆ, ಬೀದಿಯಲ್ಲಿ ಮಲಗುವ ನಿರಾಶ್ರಿತರಿಗೆ ಕೂಡ ಒಂದು ಆಧಾರವಾಗುತ್ತಿತ್ತು. ರಸ್ತೆ ಬದಿಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಎಷ್ಟೋ ಜನರು ಹತ್ಯೆಗೀಡಾಗಿದ್ದಾರೆ. ಮಹಿಳೆಯರ ಅತ್ಯಾಚಾರಗಳಾಗಿವೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ. ಇವರೆಲ್ಲರ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ. ಪೊಲೀಸರು ಮಾಡಿರುವ ಈ ಕಾರ್ಯಕ್ಕೆ ಜನರು ಹೇಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೋ ಹಾಗೆಯೇ ಸರ್ಕಾರ ಈ ಕೆಲಸವನ್ನು ಮುಂದುವರಿಸಲಿ, ನಿರಾಶ್ರಿತರಿಗೆ ಸರ್ಕಾರದ ವತಿಯಿಂದಲೇ ಆಶ್ರಯ ನೀಡಲಿ ಎನ್ನುವ ಒತ್ತಾಯಗಳು ಬಹಳಷ್ಟು ಸಮಯಗಳಿಂದ ಇವೆ. ಆದರೆ ಇನ್ನೂ ಇದು ಈಡೇರಿಲ್ಲ.

 

ಪೊಲೀಸ್ ಸಿಬ್ಬಂದಿಯ ಮೃತದೇಹವನ್ನು ಗ್ರಾಮದ ಹೊರಗೆ ಗಂಟೆಗಟ್ಟಲೆ ಕಾಯಿಸಿದ ದುಷ್ಟರು!

ಇತ್ತೀಚಿನ ಸುದ್ದಿ

Exit mobile version