ಸಾವರ್ಕರ್ ಬ್ರಿಟಿಷರಿಗೆ ಐದು ಬಾರಿ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದರು, ಗೋವು ದೇವರಲ್ಲ: ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಒಪ್ಪಿಗೆ
ಪುಣೆ: ಹಿಂದುತ್ವ ಸಿದ್ಧಾಂತಿ ವಿ.ಡಿ. ಸಾವರ್ಕರ್ ಅವರು ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿದ್ದಾಗ ಬ್ರಿಟಿಷ್ ಸರ್ಕಾರಕ್ಕೆ ಐದು ಬಾರಿ ಕ್ಷಮಾಪಣಾ ಅರ್ಜಿಗಳನ್ನು (Mercy Petitions) ಸಲ್ಲಿಸಿದ್ದರು ಎಂದು, ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಪುಣೆ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾತ್ಯಕಿ ಸಾವರ್ಕರ್ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ರಾಹುಲ್ ಗಾಂಧಿ ಪರ ವಕೀಲರು ನಡೆಸಿದ ಪಾಟೀ ಸವಾಲಿನ ವೇಳೆ, “ಸಾವರ್ಕರ್ ಐದು ಬಾರಿ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದು ನಿಜವೇ?” ಎಂಬ ಪ್ರಶ್ನೆಗೆ ಉತ್ತರಿಸಿದ ಸಾತ್ಯಕಿ, “ಹೌದು, ಸಾವರ್ಕರ್ ಅರ್ಜಿ ಸಲ್ಲಿಸಿದ್ದು ನಿಜ. ಆದರೆ ಅಂದು ಸಾವರ್ಕರ್ ಮಾತ್ರವಲ್ಲದೆ ಅನೇಕ ರಾಜಕೀಯ ಕೈದಿಗಳು ಇಂತಹ ಅರ್ಜಿಗಳನ್ನು ಸಲ್ಲಿಸುತ್ತಿದ್ದರು” ಎಂದು ಸ್ಪಷ್ಟಪಡಿಸಿದರು.
ಸಾವರ್ಕರ್ ಅವರ ದೃಷ್ಟಿಯಲ್ಲಿ ಹಸು ‘ದೇವತೆ’ಯಲ್ಲ, ಬದಲಿಗೆ ಅದೊಂದು ‘ಉಪಯುಕ್ತ ಪ್ರಾಣಿ’ ಮಾತ್ರವಾಗಿತ್ತು ಎಂಬ ವಾದವನ್ನು ಸಾತ್ಯಕಿ ಒಪ್ಪಿಕೊಂಡಿದ್ದಾರೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತೀಯರು ಬ್ರಿಟಿಷ್ ಸೇನೆಗೆ ಸೇರಬೇಕೆಂದು ಸಾವರ್ಕರ್ ಕರೆ ನೀಡಿದ್ದರು ಎಂಬ ವಿಷಯದ ಕುರಿತು ಮಾತನಾಡಿದ ಸಾತ್ಯಕಿ, “ಅದು ಬ್ರಿಟಿಷರಿಗೆ ಸಹಾಯ ಮಾಡುವ ಉದ್ದೇಶವಾಗಿರಲಿಲ್ಲ. ಬದಲಿಗೆ ಭಾರತೀಯ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ಸಿಗಲಿ ಮತ್ತು ಸ್ವಾತಂತ್ರ್ಯದ ನಂತರ ದೇಶಕ್ಕೆ ಸ್ವಂತ ಸೈನ್ಯ ಇರಲಿ ಎಂಬ ದೂರದೃಷ್ಟಿಯಿಂದ ಅವರು ಆ ಕರೆ ನೀಡಿದ್ದರು” ಎಂದು ಸಮರ್ಥಿಸಿಕೊಂಡರು.
2023 ರಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾತ್ಯಕಿ ಸಾವರ್ಕರ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆಯು ಜೂನ್ 1ಕ್ಕೆ ನಿಗದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























