ಮುಸ್ಲಿಮ್ ಶಿಕ್ಷಕನನ್ನು ವರ್ಗಾವಣೆ ಮಾಡಿಸಲು ನೀರಿಗೆ ವಿಷ ಹಾಕಿದ ಪಾಪಿಗಳು!

04/08/2025

ಬೆಳಗಾವಿ: 15 ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ವಿಷಯುಕ್ತ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ನಡೆದಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೂಲಿಕಟ್ಟಿ ಗ್ರಾಮದ ಕೃಷ್ಣ ಯಮನಪ್ಪ ಮಾದರ (26), ಸಾಗರ ಸಕ್ರೆಪ್ಪ ಪಾಟೀಲ (29), ನಾಗನಗೌಡ ಬಸಪ್ಪ ಪಾಟೀಲ ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಕರಣ ಸಂಬಂಧ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು, ಹೂಲಿಕಟ್ಟಿ ಗ್ರಾಮದಲ್ಲಿ ವಿಷನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಸರ್ಕಾರಿ ಶಾಲೆ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿರಲಿಲ್ಲ. ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿದ ಸವದತ್ತಿ ಪೊಲೀಸರು ಆರೋಪಿಗಳ ಕೃತ್ಯ ಬಯಲಿಗೆ ಎಳೆದಿದ್ದಾರೆ.

ಶಾಲೆ ಮುಖ್ಯ ಶಿಕ್ಷಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ, ಮುಖ್ಯ ಶಿಕ್ಷಕನ್ನು ಶಾಲೆಯಿಂದ ಓಡಿಸಲು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ವಿಷ ಮಿಶ್ರಿತ ನೀರುಸೇವಿಸಿ ಮಕ್ಕಳು ಮೃತಪಟ್ಟರೆ ಅದಕ್ಕೆ ಮುಖ್ಯ ಶಿಕ್ಷಕ ಹೊಣೆ ಆಗಿ ಬೇರೆ ಕಡೆ ವರ್ಗಾವಣೆ ಆಗುತ್ತಾರೆ ಎಂದು ಹೂಲಿಕಟ್ಟಿ ಗ್ರಾಮದ ಸಾಗರ ಪಾಟೀಲ, ಕೃಷ್ಣಾ ಮಾದರ, ನಾಗನಗೌಡ ಪಾಟೀಲ ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.

ಮೂವರು ಆರೋಪಿಗಳು ಪರಸ್ಪರ ಪರಿಚಿತರು, ನಾಗನಗೌಡ ಮತ್ತೊಬ್ಬ ಆರೋಪಿ ಸಾಗರ್ ಸಂಬಂಧಿಯಾಗಿದ್ದು, ಕೃಷ್ಣ ಈ ಹಿಂದೆ ಸಾಗರ್ ಅವರೊಂದಿಗೆ ಚಾಲಕನಾಗಿ ಕೆಲಸ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.  ಕೃಷ್ಣಾ ಅನ್ಯ ಜಾತಿ ಹುಡುಗಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ತಿಳಿದಿದ್ದ ಸಾಗರ್ ತನ್ನ ಸಂಚಿಗೆ ಸಹಾಯ ಮಾಡದಿದ್ದರೆ ಈ ವಿಚಾರವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಇದರಿಂದ ಹೆದರಿ ನೀರಿನಲ್ಲಿ ವಿಷ ಬೆರೆಸಲು ಕೃಷ್ಣಾ ಒಪ್ಪಿಕೊಂಡಿದ್ದ. ಆಗ ಸಾಗರ ಸಂಬಂಧಿ ನಾಗನಗೌಡ ಜೊತೆಗೆ ಮುನವಳ್ಳಿಗೆ ಹೋಗಿ ಕೀಟನಾಶಕ ತೆಗೆದುಕೊಂಡು ಬಂದಿದ್ದರು. ಬಳಿಕ ಕೃತ್ಯಕ್ಕೆ ಅದೇ ಶಾಲೆಯ ಅಮಾಯಕ ಬಾಲಕನಿಗೆ ಚಾಕೊಲೇಟ್, ಕುರುಕುರಿ ಮತ್ತು ರೂ.500 ಹಣ ನೀಡಿ ಕೃತ್ಯಕ್ಕೆ ಪ್ರಚೋದನೆ ನೀಡಿದ್ದರು. ಅವರ ಆಮಿಷಕ್ಕೆ ಒಳಗಾಗಿದ್ದ ಬಾಲಕ ಶಾಲಾ ಆವರಣದಲ್ಲಿದ್ದ ಟ್ಯಾಂಕರ್‌ನಲ್ಲಿ ವಿಷ ಬೆರೆಸಿ ಬಾಟಲಿ ಅಲ್ಲೇ ಎಸೆದಿರುವುದು ಬೆಳಕಿಗೆ ಬಂದಿತ್ತು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಭೀಮಾಶಂಕರ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕೀಟನಾಶ ಬೆರೆಸಿದ್ದ ಘಟನೆ ಜುಲೈ 14ರಂದು ನಡೆದಿತ್ತು. ಪರಿಣಾಮ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ, ಕೀಟನಾಶಕ ಬೆರೆಸಿದ್ದ ನೀರನ್ನು ಕುಡಿದು 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸವದತ್ತಿ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version