ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಟ್ಟ ವಿದ್ಯಾರ್ಥಿ ಸಂಘಟನೆ ಎಸ್‌ ಐಓ

sio
31/10/2025

ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆ ಸರ್ಕಾರಿ ಶಾಲೆಯ ಹೆಣ್ಣುಮಕ್ಕಳಿಗೆ ಶೌಚಾಲಯ ಇಲ್ಲದನ್ನು ಗಮನಿಸಿದ ವಿದ್ಯಾರ್ಥಿ ಸಂಘಟನೆಯೊಂದು, ದಾನಿಗಳ ನೆರವಿನಿಂದ ಎರಡು ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಿ ಕೊಡುವ ಮೂಲಕ ಮಾದರಿಯಾಗಿದ್ದಾರೆ. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್‌(SIO) ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳು ಎದುರಿಸುತ್ತಿದ್ದ ಶೌಚಾಲಯ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ. ದಾನಿಗಳಿಂದ ಸಂಗ್ರಹಿಸಿದ ಸುಮಾರು 56 ಸಾವಿರ ಮೊತ್ತದ ನೆರವಿನಿಂದ ಸುಸಜ್ಜಿತವಾದ ಎರಡು ಶೌಚಾಲಯವನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ.

ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಸ್‌ ಐಓ ಕರ್ನಾಟಕ ಘಟಕದ ವತಿಯಿಂದ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಅಭಿಯಾನದ ಭಾಗವಾಗಿ ಎಲ್ಲ ಶಾಲೆಗಳಿಗೆ ಎಸ್‌ ಐಓ ಪದಾಧಿಕಾರಿಗಳು ತೆರಳಿ, ಗಿಫ್ಟ್ ಕೊಟ್ಟು ಶಿಕ್ಷಕರನ್ನು ಗೌರವಿಸುವ ಕಾರ್ಯವನ್ನು ಹಮ್ಮಿಕೊಂಡಿತ್ತು. ಅಭಿಯಾನದ ಭಾಗವಾಗಿ ಬಂಟ್ವಾಳ ತಾಲೂಕಿನ ಕುಕ್ಕಾಜೆ ಸರ್ಕಾರಿ ಶಾಲೆಗೂ ಕೂಡ ಎಸ್‌ ಐಓ ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು ಭೇಟಿ ನೀಡಿದ್ದರು. ಈ ಭೇಟಿಯ ವೇಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶೋಭಾ ಅವರು, ಶಾಲೆಯಲ್ಲಿ ಹೆಣ್ಣು ಮಕ್ಕಳು ಶೌಚಾಲಯ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ತಮ್ಮಿಂದಾದ ನೆರವು ನೀಡುವುದಾಗಿ ಎಸ್‌ಐಓ ಪಾಣೆಮಂಗಳೂರು ಘಟಕದ ಅಧ್ಯಕ್ಷರಾದ ಮುಬಾರಿಶ್ ಚೆಂಡಾಡಿ ಭರವಸೆ ನೀಡಿದ್ದರು.  ಆ ಬಳಿಕ ಕುಕ್ಕಾಜೆ ಸರ್ಕಾರಿ ಶಾಲೆಯ ಶೌಚಾಲಯ ಸಮಸ್ಯೆಯ ಬಗ್ಗೆ ಕೆಲವು ದಾನಿಗಳನ್ನು ಸಂಪರ್ಕಿಸಿದ ಎಸ್‌ ಐಓ ಪದಾಧಿಕಾರಿಗಳು, ಆರ್ಥಿಕ ನೆರವು ನೀಡುವಂತೆ ಕೇಳಿಕೊಂಡಿದ್ದರು. ಎಸ್‌ ಐಓ ಮನವಿಗೆ ಸ್ಪಂದಿಸಿದ ದಾನಿಯೋರ್ವರು 25 ಸಾವಿರ ನೀಡಿದರೆ, ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದ ಪಾಣೆಮಂಗಳೂರು ಹಾಗೂ ಮಂಗಳೂರು ಘಟಕವು ಒಟ್ಟು 30 ಸಾವಿರ ರೂಪಾಯಿಗಳ ನೆರವನ್ನು ನೀಡಿತು. ಆ ಬಳಿಕ ಸ್ಥಳೀಯ ಗಾರೆ ಕೆಲಸಗಾರರನ್ನು ಸಂಪರ್ಕಿಸಿ, ಕೆಲವೇ ದಿನಗಳಲ್ಲಿ ಎರಡು ಸುಸಜ್ಜಿತವಾದ ಶೌಚಾಲಯವನ್ನು ಶಾಲೆಯ ಆವರಣದಲ್ಲೇ ಲಭ್ಯವಿದ್ದ ಜಾಗದಲ್ಲಿ ನಿರ್ಮಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಶೌಚಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕುಕ್ಕಾಜೆ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶೋಭಾ, “ಶಾಲೆಯ ಹೆಣ್ಣು ಮಕ್ಕಳಿಗೆ ಆಗುತ್ತಿದ್ದ ಶೌಚಾಲಯ ಸಮಸ್ಯೆಯ ಬಗ್ಗೆ ಹಲವರಲ್ಲಿ ತಿಳಿಸಿದ್ದೆ. ಆದರೆ, ಯಾರೂ ಕೂಡ ಗಂಭೀರವಾಗಿ ಪರಿಗಣಿಸಿರಲಿಲ್ಲ. ಎಸ್‌ ಐಓ ಪದಾಧಿಕಾರಿಗಳಲ್ಲಿ ವಿನಂತಿಸಿ, ಕೆಲವೇ ದಿನಗಳಲ್ಲಿ ಎರಡು ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇದು ನನ್ನ ಶಿಕ್ಷಕ ವೃತ್ತಿಯಲ್ಲಿನ ಹೊಸ ಅನುಭವ. ಶೌಚಾಲಯದ ಕಾಮಗಾರಿಯನ್ನು ಮುತುವರ್ಜಿ ವಹಿಸಿ, ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದು ವಿದ್ಯಾರ್ಥಿ ಸಂಘಟನೆಯೊಂದರ ಮಾದರಿ ಸೇವೆ. ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು” ಎಂದು ಬಣ್ಣಿಸಿದರು.

ಇದೇ ವೇಳೆ ಮಾತನಾಡಿದ ಕುಕ್ಕಾಜೆ ಪಂಚಾಯಿತಿಯ ಅಧ್ಯಕ್ಷರಾದ ಇಬ್ರಾಹಿಂ, ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್ ಬೋಳಂಗಡಿ,  ಎಸ್‌ ಐಓ ಕರ್ನಾಟಕ ರಾಜ್ಯ‌ ಕಾರ್ಯದರ್ಶಿ ಆಸಿಫ್ ಡಿ.ಕೆ. ಮಾತನಾಡಿದರು.

ಶಾಲೆಗೆ ಶೌಚಾಲಯ ನಿರ್ಮಿಸಿಕೊಟ್ಟದ್ದಕ್ಕಾಗಿ ಎಸ್‌ ಐಓ ಪದಾಧಿಕಾರಿಗಳನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಅಭಿನಂದಿಸಿ, ಗೌರವಿಸಲಾಯಿತು.  ಕಾರ್ಯಕ್ರಮದಲ್ಲಿ ಕುಕ್ಕಾಜೆ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಸಾದ್. ಕೆ, ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(HRS)ಯ ಬಂಟ್ವಾಳ ತಾಲೂಕು ಕ್ಯಾಪ್ಟನ್ ಅಬ್ದುಲ್ ಸತ್ತಾರ್ ಗೂಡಿನಬಳಿ, M.H.ಅಬ್ದುಲ್ ಶುಕೂರ್ ಬೋಳಂಗಡಿ, ಶಂಶೀರ್ ಮೆಲ್ಕಾರ್, ಶರೀಫ್ ಮೆಲ್ಕಾರ್, ಎಸ್‌ಐಓ ಪಾಣೆಮಂಗಳೂರು ಘಟಕದ ಅಧ್ಯಕ್ಷ ಮುಬಾರಿಶ್ ಚೆಂಡಾಡಿ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ -ವಿದ್ಯಾರ್ಥಿನಿಯರು  ಹಾಗೂ ಎಸ್ಐಓ ಪಾಣೆಮಂಗಳೂರು ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version