10:29 PM Wednesday 29 - October 2025

ರಾಜ್ಯ ಸರ್ಕಾರದಿಂದ ಟೆಂಡರ್ ಗೋಲ್ ಮಾಲ್: 500 ಕೋಟಿ ಟೆಂಡರ್ ಈಗ ಸಾವಿರ ಕೋಟಿ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗಂಭೀರ ಆರೋಪ

congress leaders
15/02/2023

ಬೆಂಗಳೂರು: ರಾಜ್ಯ ಸರ್ಕಾರದ ಅವಧಿ ಇನ್ನು ಒಂದು ತಿಂಗಳು ಮಾತ್ರವಿದ್ದು, ಈ ಸಮಯದಲ್ಲಿ  ಬಿಜೆಪಿ ಸರ್ಕಾರ ಎಲ್ಲಾ ಇಲಾಖೆಗಳ ಟೆಂಡರ್ ಅನ್ನು ತರಾತುರಿಯಲ್ಲಿ ಸಿದ್ದಪಡಿಸಿ 500 ಕೋಟಿ ರೂ ಟೆಂಡರ್ ಅನ್ನು 1000 ಕೋಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು‌.

ತಮ್ಮ ನಿವಾಸದಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಟೆಂಡರ್ ಗೋಲ್ ಮಾಲ್ ನಡೆಸುತ್ತಿದ್ದು, ಬಜೆಟ್ ಅಧಿವೇಶನದ ನಂತರ ಮುಂದಿನ ತಿಂಗಳು 7-10 ರ ಒಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಬಿಜೆಪಿ ಸರ್ಕಾರ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಇಂಧನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಟೆಂಡರ್ ಗಳನ್ನು ತರಾತುರಿಯಲ್ಲಿ ಸಿದ್ಧಪಡಿಸುತ್ತಿದೆ. ಈ ಬಗ್ಗೆ ನಾವು ಎಲ್ಲ ರೀತಿಯ ದಾಖಲೆ ನೀಡಲು ಸಿದ್ಧವಿದ್ದೇವೆ ಎಂದು ಹೇಳಿದರು.

ಪ್ರಮುಖ ಇಲಾಖೆಗಳಲ್ಲಿ ಪ್ರತಿ ಟೆಂಡರ್ ಮೊತ್ತವನ್ನು ದುಪ್ಪಟ್ಟು ಮಾಡಿ ಕೆಲವನ್ನು ಸಂಪುಟದಲ್ಲಿ ತೀರ್ಮಾನಿಸಿ ನೀಡಿದರೆ, ಮತ್ತೆ ಕೆಲವನ್ನು ಸಂಪುಟದ ತೀರ್ಮಾನವಿಲ್ಲದೇ ಕೇವಲ 7 ದಿನಗಳ ಅಲ್ಪಾವಧಿಯಲ್ಲೇ ನೀಡುತ್ತಿದ್ದಾರೆ. ಶಾಸಕರಿಗೆ ಇದರ ಉಸ್ತುವಾರಿ ವಹಿಸಿ, ಅವರೇ ಗುತ್ತಿಗೆದಾರರನ್ನು ಗುರುತಿಸಿ ಟೆಂಡರ್ ನೀಡುವ ಜವಾಬ್ದಾರಿ ನೀಡಲಾಗಿದೆ. ಈ ಶಾಸಕರು ಬೀದಿ, ಬೀದಿಯಲ್ಲಿ ಗುತ್ತಿಗೆದಾರರಿಗೆ ಆಹ್ವಾನ ನೀಡುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ದೂರು ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಶಾಸಕರು, ಮಂತ್ರಿಗಿರಿ ಸಿಗದವರಿಗೆ ಈ ರೀತಿ ಟೆಂಡರ್ ಹಂಚುತ್ತಿದ್ದಾರೆ. ಈ ವಿಚಾರವಾಗಿ ಶಾಸಕರು, ಗುತ್ತಿಗೆದಾರರು ನಮಗೆ ಮಾಹಿತಿ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಳೆ ಕಾಮಗಾರಿಯ ಸಾವಿರಾರು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದು, ಯಾರು ಮಂತ್ರಿಗಳು ಹಾಗೂ ಸರ್ಕಾರಕ್ಕೆ ಕಮಿಷನ್ ನೀಡುತ್ತಾರೋ ಅವರ ಬಿಲ್ ಮಾತ್ರ ಪಾಸ್ ಮಾಡುತ್ತಿದ್ದಾರೆ. ಇನ್ನು ನೂತನ ಟೆಂಡರ್’ಗಳನ್ನು ಪಾರದರ್ಶಕವಾಗಿ, ಅರ್ಹ ಗುತ್ತಿಗೆದಾರರಿಗೆ ನೀಡುತ್ತಿಲ್ಲ. ಶಿವರಾಮ ಕಾರಂತ್ ಲೇಔಟ್ ನಿರ್ಮಾಣಕ್ಕೆ ಜಮೀನು ವಶಪಡಿಸಿಕೊಳ್ಳದೇ ಟೆಂಡರ್ ಕರೆಯಲಾಗಿದೆ. ಅಲ್ಲದೆ ಮುಂಗಡವಾಗಿ ಹಣ ಬಿಡುಗಡೆ ಮಾಡಿ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ನಗರದಲ್ಲಿ ಯಾವುದಾದರೂ ಕೆಲಸ ಆಗಬೇಕಾದರೆ ಸಿಎಂ ಕಚೇರಿಯಲ್ಲಿ ಡೀಲ್ ಆಗುತ್ತಿವೆ. ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರದ ವಿರುದ್ದ ನಾವು ಹೋರಾಟ ಮಾಡುತ್ತೇವೆ. ಸರ್ಕಾರ, ಗುತ್ತಿಗೆದಾರರು, ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಮುಂದೆ ಅಧಿಕಾರಕ್ಕೆ ಬಂದ ನಂತರ ಕಳೆದ 6 ತಿಂಗಳಿಂದ ನಡೆಸಲಾಗಿರುವ ಅಕ್ರಮ ಟೆಂಡರ್ ಗಳನ್ನು ನಾವು ರದ್ದು ಮಾಡಲಿದ್ದೇವೆ. ಎಲ್ಲ ಟೆಂಡರ್ ತನಿಖೆ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ ಬೆಂಗಳೂರಿನ ಸದಾಶಿವನಗರದ  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಿವಾಸದಲ್ಲಿ ಬುಧವಾರ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಉಷಾ ಶಿವಕುಮಾರ್, ಸಂಸದ ಡಿ ಕೆ ಸುರೇಶ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಮೇಲ್ಮನೆ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version