ನಾಲೆಗೆ ಉರುಳಿದ ಕಾರು: ಐವರ ದಾರುಣ ಸಾವು: ಕಾರು ಹೊರ ತೆಗೆದಾಗ ರಿಂಗ್ ಆಯ್ತು ಮೃತನ ಮೊಬೈಲ್!
	
	
	
	
	
08/11/2023
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನಾಲೆಗೆ ಬಿದ್ದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಚಂದ್ರಪ್ಪ, ಕೃಷ್ಣಪ್ಪ, ಧನಂಜಯ, ಜಯಣ್ಣ ಮತ್ತು ಬಾಬು ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಭದ್ರಾವತಿ ನಿವಾಸಿಗಳು ಎಂದು ತಿಳಿದು ಬಂದಿದೆ.
ಮಂಗಳವಾರ ಸಂಜೆ ಇಂಡಿಕಾ ಕಾರಿನಲ್ಲಿ ಸಂಜೆ 4 ಗಂಟೆಯ ವೇಳೆಗೆ ಮೈಸೂರಿನಿಂದ ಭದ್ರಾವತಿ ಕಡೆಗೆ ಇವರು ಪ್ರಯಾಣಿಸಿದ್ದರು. ಬನಘಟ್ಟದ ವಿಸಿ ನಾಲೆ ಸೇತುವೆ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿದೆ.
ಸ್ಥಳೀಯರ ಮಾಹಿತಿಯ ಮೇರೆಗೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯ ಈಜುಗಾರರ ನೆರವಿನಿಂದ ಕಾರನ್ನು ಹೊರ ತೆಗೆದಿದ್ದಾರೆ. ಕಾರು ಹೊರ ತೆಗೆಯುತ್ತಿದ್ದ ಸಂದರ್ಭದಲ್ಲಿಯೇ ಮೃತರೊಬ್ಬರ ಮೊಬೈಲ್ ರಿಂಗ್ ಆಗಿದೆ. ಕರೆ ಸ್ವೀಕರಿಸಿದ ಸಿಬ್ಬಂದಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

























