ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ತೀವ್ರ: ಟಿಎಂಸಿ ನಾಯಕರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು

04/10/2023

ದೆಹಲಿಯ ಕೃಷಿ ಭವನದ ಒಳಗೆ ಪ್ರತಿಭಟನೆ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ 30 ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಟಿಎಂಸಿ ಪಕ್ಷದ ಸದಸ್ಯರು ಹಂಚಿಕೊಂಡ ವೀಡಿಯೊಗಳಲ್ಲಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ನಾಯಕರನ್ನು ಕೃಷಿ ಭವನದಿಂದ ಪೊಲೀಸರು ಎಳೆದೊಯ್ಯುತ್ತಿರುವುದನ್ನು ತೋರಿಸಲಾಗಿದೆ.

ಮತ್ತೊಂದು ವೀಡಿಯೊದಲ್ಲಿ, ಟಿಎಂಸಿ ನಾಯಕರನ್ನು ದೆಹಲಿ ಪೊಲೀಸ್ ವ್ಯಾನ್‌ನಲ್ಲಿ ಸ್ಥಳದಿಂದ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಮಹಿಳಾ ಸಂಸದರು ಸೇರಿದಂತೆ ಪಕ್ಷದ ನಾಯಕರನ್ನು ಯಾವುದೇ ದಾಖಲೆಗಳಿಲ್ಲದೆ ಬಂಧಿಸಲಾಗುತ್ತಿದೆ ಎಂದು ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.

ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರನ್ನು ಒಳಗೊಂಡ ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಿಯೋಗ ಸೋಮವಾರದಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದೆ. ಎಂಜಿಎನ್ಆರ್ ಇಜಿಎ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅವರು ಸೋಮವಾರ ಗಾಂಧಿ ಜಯಂತಿಯ ಸಂದರ್ಭದಲ್ಲಿ ರಾಜ್ ಘಾಟ್ ನಲ್ಲಿ ತಮ್ಮ ಧರಣಿಯನ್ನು ನಡೆಸುತ್ತಿದ್ದರು.

ಮಂಗಳವಾರ, ಟಿಎಂಸಿ ನಿಯೋಗವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ನಂತರ ಕೃಷಿ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮೆರವಣಿಗೆ ನಡೆಸಿತು. ಅಲ್ಲಿ ಅವರು ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿಯಾದರು. ಟಿಎಂಸಿ ಪ್ರಕಾರ, ಅವರು ಒಂದೂವರೆ ಗಂಟೆಗಳ ಕಾಲ ಕಾದ ನಂತರ ಕೇಂದ್ರ ಸಚಿವರು ಅವರನ್ನು ಭೇಟಿಯಾಗಲು ನಿರಾಕರಿಸಿದರು.
ಪಶ್ಚಿಮ ಬಂಗಾಳ ರಾಜ್ಯಕ್ಕೆ ಕೇಂದ್ರ ಸರ್ಕಾರದ ನಿಧಿ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ತೀವ್ರಗೊಂಡಿದೆ.

ಇತ್ತೀಚಿನ ಸುದ್ದಿ

Exit mobile version