ಬೇಟೆಗೆ ಹೋದವರೇ ಬೇಟೆಯಾದರೆ? | ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ: ಗ್ರಾಮಸ್ಥರಿಂದ ಉಗ್ರ ಪ್ರತಿಭಟನೆ
ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ವಲಯದ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದು ಮೂವರು ಅಸುನೀಗಿದ್ದಾರೆ.
ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ಅಂತೋನಿಸ್ವಾಮಿ, ಪೀಟರ್ ಹಾಗೂ ಕುಮಾರ್ ಮೃತಪಟ್ಟಿದ್ದಾರೆ. ಮಹಿಮದಾಸ್ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ವನ್ಯಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದ ಮಾಹಿತಿ ಲಭಿಸಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಶರಣಾಗುವಂತೆ ಸೂಚಿಸಿದಾಗ, ಬೇಟೆಗಾರರು ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ, ಪ್ರತಿದಾಳಿ ನಡೆಸಿದಾಗ ಮೂವರು ಮೃತಪಟ್ಟಿದ್ದಾರೆ ಎಂದು ಸಿಬ್ಬಂದಿ ಹಾಗೂ ಸಚಿವರು ತಿಳಿಸಿದ್ದಾರೆ.
ಉದ್ರಿಕ್ತರಿಂದ DRFO ಕಚೇರಿ ಧ್ವಂಸ:
ಮೂವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಶಾಗ್ಯ DRFO ಕಚೇರಿಗೆ ನುಗ್ಗಿ ಪೀಠೋಪಕರಣ ಹಾಗೂ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.
ಮೃತಪಟ್ಟವರು ಕಳ್ಳ ಬೇಟೆಗಾರರಲ್ಲ, ಅವರು ಸಣ್ಣ ಮಕ್ಕಳಿರುವ ಸಾಮಾನ್ಯ ರೈತರು. ಅರಣ್ಯ ಸಿಬ್ಬಂದಿ ಮೇಲೆ ಅವರು ಯಾವುದೇ ದಾಳಿ ಮಾಡಿಲ್ಲ. ಪ್ರತಿದಾಳಿಯ ನೆಪದಲ್ಲಿ ಅರಣ್ಯ ಇಲಾಖೆಯವರೇ ಏಕಾಏಕಿ ಶೂಟ್ ಮಾಡಿ ಕೊಂದಿದ್ದಾರೆ ಎಂದು ಗ್ರಾಮಸ್ಥರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. ಈ ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಹನೂರಿನಲ್ಲಿ ಬೃಹತ್ ಪ್ರತಿಭಟನೆ:
ತೋಮಿಯಾರ್ ಪಾಳ್ಯ, ಮಾರ್ಟಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹನೂರು ಪಟ್ಟಣದಲ್ಲಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹನೂರು ಶಾಸಕ ಮಂಜುನಾಥ್ ಭೇಟಿ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























