ಅಪರಾಧಿ ಪ್ರಜ್ವಲ್ ರೇವಣ್ಣಗೆ ಯಾವ ಕೃತ್ಯಕ್ಕೆ ಎಷ್ಟು ಶಿಕ್ಷೆ?: ಜೈಲಿನಲ್ಲಿ ಸಿಗಲಿರುವ ಕೂಲಿ ಎಷ್ಟು?

prajwal revanna
03/08/2025

ಬೆಂಗಳೂರು: ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ದುಷ್ಕೃತ್ಯದಲ್ಲಿ ಅಪರಾಧಿ ಎಂದು ನಿರ್ಣಯಿಸಲಾಗಿದ್ದ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (34) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿಯ (ಜೀವಮಾನ ಪರ್ಯಂತ) ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಈ ಕುರಿತಾದ ತೀರ್ಪನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಶನಿವಾರ ಸಂಜೆ 4.10ಕ್ಕೆ ತೆರೆದ ನ್ಯಾಯಾಲಯದಲ್ಲಿ ಘೋಷಿಸಿದರು.

“ಅಪರಾಧಿಯು ಜೈಲು ಶಿಕ್ಷೆ ಅನುಭವಿಸುವುದರ ಜೊತೆಗೆ 11.25 ಲಕ್ಷ ಪರಿಹಾರವನ್ನು ಸಂತ್ರಸ್ತೆಗೆ ಮತ್ತು 335 ಸಾವಿರ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಜ್ವಲ್‌ಗೆ ವಿವಿಧ ಅಪರಾಧಿಕ ಕಲಂಗಳ ಅಡಿಯಲ್ಲಿ ನ್ಯಾಯಾಧೀಶರು ಕಠಿಣವಾದ ಗರಿಷ್ಠ ಜೈಲು ಶಿಕ್ಷೆ ವಿಧಿಸಿರುವ ಕಾರಣ, ಈ ಶಿಕ್ಷಾ ಅವಧಿಯನ್ನು ಮೊಟಕುಗೊಳಿಸುವ ಅಧಿಕಾರವೂ ಸರ್ಕಾರಕ್ಕೆ ಇಲ್ಲದಂತಾಗಿದೆ. ಒಟ್ಟು 480 ಪುಟಗಳ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಯಾವುದಕ್ಕೆ ಎಷ್ಟು ಶಿಕ್ಷೆ?

ಐಪಿಸಿ ಕಲಂಗಳು: 
376(2)(ಎನ್): (ಪದೇ ಪದೇ ಅತ್ಯಾಚಾರ) ಈ ಕಲಂನಡಿಯ ಅಪರಾಧಕ್ಕೆ ಜೀವನ ಪರ್ಯಂತ ಕಠಿಣ ಜೈಲು ಶಿಕ್ಷೆ ಮತ್ತು 35 ಲಕ್ಷ ದಂಡ.
376(2)(ಕೆ): (ಪ್ರಬಲ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಈ ಕಲಂನಡಿಯ ಅಪರಾಧಕ್ಕೆ ಜೀವಾವಧಿ (ಜೀವಮಾನ ಪರ್ಯಂತ) ಜೈಲು ಶಿಕ್ಷೆ, 25 ಲಕ್ಷ ದಂಡ.
354(ಬಿ): (ವಿವಸ್ತ್ರಗೊಳಿಸುವಾಗ ಆಕೆಯ ಮೇಲೆ ಹಲ್ಲೆ) ಈ ಕಲಂನ ಅಡಿಯ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ 50 ಸಾವಿರ ದಂಡ.
354-ಎ: (ಮಹಿಳೆಯ ಘನತೆಗೆ ಚ್ಯುತಿ) ಅಡಿ ಅಪರಾಧಕ್ಕೆ 3 ವರ್ಷ ಜೈಲು, 325 ಸಾವಿರ ದಂಡ.
354(ಸಿ): (ವಿವಸ್ತ್ರಗೊಳಿಸಿರುವ ಮಹಿಳೆಯನ್ನು ನೋಡಿ ಆನಂದಿಸುವುದು) ಅಡಿ ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ದಂಡ.
201: (ಅಪರಾಧ ಕೃತ್ಯದ ಸಾಕ್ಷ್ಯ ನಾಶ) ಈ ಕಲಂ ಅಡಿಯ ಅಪರಾಧಕ್ಕೆ 3 ವರ್ಷ ಶಿಕ್ಷೆ, 720 ಸಾವಿರ ದಂಡ.
506: (ಕ್ರಿಮಿನಲ್ ಬೆದರಿಕೆ) ಈ ಕಲಂನ ಅಡಿಯಲ್ಲಿ 2 ವರ್ಷ ಶಿಕ್ಷೆ, 210 ಸಾವಿರ ದಂಡ.
ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66ಇ (ಖಾಸಗಿತನ ಉಲ್ಲಂಘಿಸಿ ವಿಡಿಯೊ ಮಾಡಿ, ಪ್ರಸಾರ ಮಾಡಿರುವುದು) ಈ ಕಲಂನ ಅಡಿಯ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ, 225 ಸಾವಿರ ದಂಡ.

ಜೈಲಿನ ಸಮವಸ್ತ್ರ, ಕೂಲಿ ನಿಗದಿ:  ಅಪರಾಧಿ ಪ್ರಜ್ವಲ್ ರೇವಣ್ಣನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಶನಿವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಶಿಕ್ಷೆ ನಿಗದಿಯಾದ ಬಳಿಕ ಮತ್ತೆ ಅದೇ ಕಾರಾಗೃಹಕ್ಕೆ ಪ್ರಜ್ವಲ್‌ನನ್ನು ಕರೆದೊಯ್ಯಲಾಯಿತು. ಇದುವರೆಗೂ ವಿಚಾರಣಾಧೀನ ಕೈದಿಯಾಗಿದ್ದ ಪ್ರಜ್ವಲ್ ಇನ್ನು ಮುಂದೆ ಸಜಾ ಬಂಧಿಯಾಗಿ ಜೈಲಿನಲ್ಲಿ ಇರಲಿದ್ದಾನೆ.

ಪ್ರಜ್ವಲ್‌ ಗೆ ಕೈದಿ ಸಂಖ್ಯೆ ನೀಡಲಾಗುತ್ತದೆ. ಜತೆಗೆ ಜೈಲಿನ ಸಮವಸ್ತ್ರ ನೀಡಲಾಗುತ್ತದೆ. ಇತರೆ ಸಜಾ ಬಂಧಿಗಳಂತೆಯೇ ಪ್ರಜ್ವಲ್‌ ಗೂ ಕೂಲಿ ನಿಗದಿಪಡಿಸಿ ಕೆಲಸ ನೀಡಲಾಗುವುದು ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD 

ಇತ್ತೀಚಿನ ಸುದ್ದಿ

Exit mobile version