ಕಾಡಾನೆ ದಾಳಿಯಿಂದ ಉಂಟಾಗುವ ಸಾವು ನೋವುಗಳಿಗೆಲ್ಲಾ ಕಾರಣ ಯಾರು?

ಕಾಡು ಬಿಟ್ಟು ಈ ಆನೆಗಳೆಲ್ಲಾ ಕಾಫಿ ತೋಟಕ್ಕೆ ಬಂದು ಜೀವ, ಬೆಳೆ, ಆಸ್ತಿಪಾಸ್ತಿ ಹಾನಿ ಮಾಡುತ್ತಿರುವುದಕ್ಕೆ ಕಾರಣ ಯಾರು..?. ಪಶ್ದಿಮಘಟ್ಟದ ದಟ್ಡ ರಕ್ಷಿತ ಅರಣ್ಯಗಳಲ್ಲಿ ಜಲ ವಿದ್ಯುತ್ ಯೋಜನೆಗಳು, ಗ್ಯಾಸ್ ಪೈಪ್‌ಲೈನ್, ಹೈ ಟೆನ್ ಷನ್ ವಿದ್ಯುತ್ ಮಾರ್ಗ, ಎತ್ತಿನಹೊಳೆ ಯೋಜನೆ ಇಂತಹ ಯೋಜನೆಗಳ ಹೆಸರಿನಲ್ಲಿ ಹಂತ ಹಂತವಾಗಿ ಕಾಡು ನಾಶವಾಗಿದೆ, ನಾಶವಾಗುತ್ತಿದೆ. ಇದಕ್ಕೆಲ್ಲಾ ಅನುಮತಿ ಕೊಟ್ಟವರು ನಮ್ಮಿಂದ ಆಯ್ಕೆಗೊಂಡ ಜನಪ್ರತಿನಿಧಿಗಳಲ್ಲವೆ,. ಆ ಜಲ ವಿದ್ಯುತ್ ಯೋಜನೆಗಳೆಲ್ಲಾ ರಾಜಕಾರಣಿಗಳು ಹಾಗೂ ರಾಜಕಾರಣಿಗಳ ಕೃಪಾ ಕಟಾಕ್ಷ ಇರುವ ಬಂಡವಾಳ ಶಾಹಿಗಳದ್ದೇ ಆಗಿವೆ. ‘ಸಸ್ಯ ಸಂಕುಲ, ಜೀವ ಸಂಕುಲ, ಪ್ರಪಂಚದ 7 ಅತ್ಯಂತ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ನಮ್ಮ ಪಶ್ಚಿಮಘಟ್ಟ ಕೂಡ ಒಂದು ಎಂದು ಹೇಳುತ್ತೇವೆ. ಇವತ್ತು ಇದರ ಪರಿಸ್ಥಿತಿ ಹೇಗಿದೆ. ಕಾಡಿನಲ್ಲಿ ಕಾಂಕ್ರೀಟ್ ಗೋಡೆಗಳು, ಯಂತ್ರಗಳ ಕರ್ಕಶ ಶಬ್ದ, ರಾತ್ರಿ ವಿದ್ಯುತ್ ದೀಪಗಳ ಬೆಳಕು, ಈ ಜಲ ವಿದ್ಯುತ್ ಯೋಜನೆಗಳ ಪ್ರದೇಶಗಳಿಗೆ ಕಾಡಿನ ಮಧ್ಯ ಕಾಂಕ್ರೀಟ್ ರಸ್ತೆಗಳು, ವಾಹನಗಳ ಶಬ್ದ, ಬೆಳಕು, ಕಾಡಿನೊಳಗೆ ಕಾರ್ಮಿಕರ ಚಲನ ವಲನ, ಹೀಗೆ ಕಾಡಾನೆಗಳಿಂದ ಹಿಡಿದು ಎಲ್ಲಾ ವನ್ಯಜೀವಿಗಳ ಆವಾಸ ಸ್ಥಾನದಲ್ಲಿ ಮನುಷ್ಯನ ಓಡಾಟವಿದೆ. ಇದಕ್ಕೆಲ್ಲಾ ಕಾರಣ (ನಮ್ಮಿಂದ ಆಯ್ಕೆಯಾದ ಜನಪ್ರತಿನಿದಿಗಳು) ಸರ್ಕಾರಗಳಲ್ಲವೆ?
ಆರ್‌ಎಫ್‌ಓ ಗೆ ವಿಧಾನ ಸಭೆಯಲ್ಲಿ ಛೀ ಮಾರಿ;
ಹಿಂದೆ ಭೀಮೇಶ್ವರಗುಡಿಯಲ್ಲಿ ಎತ್ತಿನಹಳ್ಳ ಬಂಡೆಗಳ ಮೇಲೆ ಚಿಮ್ಮಿಕ್ಕಿ ಹರಿಯುತ್ತಿದ್ದರೆ, ಅದರ ಎರಡೂ ಕಡೆ ಹಸಿರು ಹೊದ್ದ ದಟ್ಟವಾದ ವಾಟೆ ತುಂಬಿಕೊಂಡಿತ್ತು. ಎತ್ತಿನಹೊಳೆ ಯೋಜನೆ ಪೈಪ್‌ಲೈನ್ ಗಾಗಿ ಭೂಮಿ ಬಗೆದ ಸಾವಿರಾರು ಟಿಪ್ಪರ್ ಮಣ್ಣು ತಂದು ಈ ಪ್ರದೇಶಕ್ಕೆ ಸುರಿದು ವಾಟೆ, ಹಳ್ಳ ಎಲ್ಲವನ್ನೂ ಮುಚ್ಚಿ ಅಲ್ಲಿಯ ಪರಿಸರವನ್ನೇ ನಾಶ ಮಾಡಿದರು. ಆ ಸಮಯದಲ್ಲಿ ಇದ್ದಂತಹ ಆರ್‌ಎಫ್ ಓ ತಪ್ಪು ಮಾಡಿದ ಗುತ್ತಿಗೆದಾರರ ಕಡೆಯ ಎಂಜಿನಿಯರ್ ಒಬ್ಬರ ಮೇಲೆ ಮೊಕದ್ದಮೆ ದಾಖಲು ಮಾಡಿದರು. ಎಂತಾ ದುರಂತ ಎಂದರೆ, ಆ ಒಬ್ಬ ಧಕ್ಷ ಅಧಿಕಾರಿಯನ್ನು ವಿಧಾನ ಸಭೆಗೆ ಕರೆಸಿ ಛೀ ಮಾರಿ ಹಾಕಿಸಿದರು.
ಕಾಡು ನಾಶ ಮಾಡಿದ ಕಂಪನಿ ಮೇಲೆ ಮೊಕದ್ದಮೆ ಹಾಕಿದ ಆರ್ ಎಫ್‌ಓ ಎತ್ತಂಗಡಿ :
ಮಾರುತಿ ಪವರ್ ಜೆನ್ ಜಲ ವಿದ್ಯುತ್ ಯೋಜನೆಯಲ್ಲಂತೂ ಮರಗಳ ಮಾರಣ ಹೋಮವೇ ಆಗಿದೆ. ಕಾಗಿನಹರೆ ರಕ್ಷಿತ ಅರಣ್ಯ ಅದೊಂದು ಹಾಟ್ ಸ್ಪಾಟ್ ನಲ್ಲಿ ಡೈನಮೆಂಟ್ ತಯಾರಿಸಿ ಕಾನೂನು ಬಾಹಿರವಾಗಿ ಬಂಡೆಗಳನ್ನು ಸಿಡಿಸಿ, ಅಕ್ರಮವಾಗಿ ಸುರಂಗವೊಂದನ್ನು ನಿರ್ಮಾಣ ಮಾಡಿದ್ದರು, ಆ ಕಂಪನಿಯ ವಿರುದ್ದ ಆಗಿನ ಆರ್‌ಎಫ್ ಒಬ್ಬರು 8 ರಿಂದ 10 ಮೊಕದ್ದಮೆ ದಾಖಲು ಮಾಡಿದರು. ಪ್ರಕರಣ ದಾಖಲು ಮಾಡಿದ ಕೆಲವೇ ದಿನಗಳಲ್ಲಿ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಲಾಯಿತು. ಈ ಎರಡು ಘಟನೆಗಳು ಉದಾಹರಣೆ ಅಷ್ಟೇ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಇಂತಹ ಒತ್ತಡಗಳು ನಿರಂತರ ಎನ್ನುವುದು ಎಲ್ಲರಿಗೂ ಗೊತ್ತಿದೆ.
ಐದು ಬೆರಳು ಸಮ ಇಲ್ಲ ಎನ್ನುವುದು ಎಷ್ಟು ಸತ್ಯವೋ ಅದೇ ರೀತಿ ಕೆಲ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂಬುದು ಒಂದು ಕಡೆ ಇರಲಿ, ಇದನ್ನೆಲ್ಲಾ ಏಕೆ ಹೇಳಬೇಕಾಗಿದೆ ಎಂದರೆ, ಅಭಿವೃದ್ಧಿ ಹೆಸರಿನಲ್ಲಿ ಕಾಡು ನಾಶವಾಗುವುದಕ್ಕೆ ಹಾಗೂ ನಾಶ ಆಗುತ್ತಿರುವುದಕ್ಕೆ ಅರಣ್ಯ ಇಲಾಖೆಯವರು ಕಾರಣರಲ್ಲ. ಸರ್ಕಾರಗಳು ಎಂಬುದನ್ನು ಹೇಳಬೇಕಿದೆ. ಕಾಡು ನಾಶವಾಗುತ್ತಿರುವುದು, ವನ್ಯ ಜೀವಿಗಳ ಆವಾಸ ಸ್ಥಾನಗಳೆಲ್ಲಾ ಕಾಂಕ್ರೀಟ್, ಯಂತ್ರಗಳು ಶಬ್ದ ಮಾಡುತ್ತಿರುವ ಪರಿಣಾಮ ಕಾಡಾನೆ, ಕಾಡುಕೋಣ ಸೇರಿದಂತೆ ಬಹುತೇಕ ಪ್ರಾಣಿಗಳು ಕಾಡು ಬಿಟ್ಟು ಕಾಫಿ ತೋಟಕ್ಕೆ ಬಂದಿವೆ. ಕಾಫಿ ತೋಟಗಳಲ್ಲಿಯೇ ಮರಿ ಮಾಡಿಕೊಡು ವಂಶ ಹೆಚ್ಚು ಮಾಡಿಕೊಂಡಿರುವ ಈ ಆನೆಗಳು ಕಾಡಿಗೆ ಬಿಟ್ಟರೂ ಕಾಡಿನಲ್ಲಿ ಇರುವುದಿಲ್ಲ. ಕಾಡಿನಲ್ಲಿ ಅವುಗಳಿಗೆ ನೀರು, ಆಹಾರ ಇಲ್ಲ. ಏನು ಮಾಡುತ್ತವೆ. ಸುಮಾರು 90 ಕಾಡಾನೆಗಳು ಸಕಲೇಶಪುರ—ಆಲೂರು-–ಬೇಲೂರು ಈ ಭಾಗದಲ್ಲಿಯೇ ಅಡ್ಡಾಡಿಕೊಂಡಿವೆ.
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಏನು ಮಾಡಬಹುದು, ಒಬ್ಬರ ತೋಟಕ್ಕೆ ಬಂದ ಆನೆಯನ್ನು ಬೇರೆ ಕಡೆ ಓಡಿಸಬೇಕು. ಅರಣ್ಯ ಇಲಾಖೆಯ ಎಲ್ಲಾ ವಲಯಗಳಲ್ಲಿಯೂ ಸಿಬ್ಬಂದಿ ಕೊರತೆ ಇದೆ. ಆನೆ ಓಡಿಸುವ ಸಿಬ್ಬಂದಿಗೆ ಹೆಚ್ಚುವರಿ ವಾಹನಗಳ ವ್ಯವಸ್ಥೆ ಇಲ್ಲ, ಬೈಕ್ ಗಳಲ್ಲಿ ಹೋಗಬೇಕು. ಮೊನ್ನೆ ಮೂಡಿಗೆರೆಯಲ್ಲಿ ಆರ್ ಆರ್ ಟಿ ನೌಕರರೊಬ್ಬರು ಅಟ್ಟಿಸಿಕೊಂಡು ಬಂದ ಆನೆಯಿಂದ ಜೀವ ಉಳಿಸಿಕೊಳ್ಳಲು ಮರ ಹತ್ತಿದ ವಿಡಿಯೋ ನೋಡಿದ್ದೇವೆ. ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾರೆ. ಶಾರ್ಪ್ ಶೂಟರ್ ವೆಂಕಟೇಶ್ ಆನೆ ದಾಳಿಯಿಂದ ಜೀವ ಕಳೆದುಕೊಂಡರು, ಕಾಡಾನೆಗಳಿಂದ ಜೀವ ಹಾನಿ ಆಗದಂತೆ ತಡೆಯುವ ಕಾರ್ಯಾಚರಣೆಯಲ್ಲಿ ಇನ್ನೂ ಹಲವು ಮಂದಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಾವು ಮತ್ತು ಶಾಶ್ವತ ಅಂಗವಿಕಲರಾಗಿದ್ದಾರೆ. ಅವರಿಗೂ ಒಂದು ಕುಟುಂಬ ಇದೆ ಅಲ್ವಾ. ಅತ್ತ ಕಾಡಿಗೆ ಬೆಂಕಿ ಬಿಳದಂತೆ ಎಚ್ಚರಿಕೆ ವಹಿಸಬೇಕು, ಬೆಂಕಿ ಬಿದ್ದ ಕೂಡಲೇ ಓಡಬೇಕು, ಶಿಕಾರಿ, ಕಾನೂನು ಬಾಹಿರವಾಗಿ ಮರ ಕಡಿದ ಪ್ರಕರಣಗಳು, ಅರಣ್ಯ ಒತ್ತುವರಿ, ಇತ್ತ ಕಾಡಾನೆ ದಾಳಿ ಇಷ್ಟೆಲ್ಲಾ ಸಮಸ್ಯೆಗಳ ಒತ್ತಡದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.
ಈಗ ಕಾಡು ನಾಶ ಆಗಿದೆ, ಕಾಡಾನೆ ಕಾಟಿಗಳೆಲ್ಲಾ ಕಾಡು ಬಿಟ್ಟು ಊರಿಗೆ ಬಂದಿವೆ. ಜೀವ ಹಾಗೂ ಬೆಳೆ ಹಾನಿ ನಿರಂತರವಾಗಿದೆ. ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಸಮಸ್ಯೆಗೆ ಆಗಬೇಕಾಗಿರುವುದು ಶಾಶ್ವತ ಪರಿಹಾರವೇ ಹೊರತು, ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವುದಲ್ಲ.
ಮೊನ್ನೆ ಬ್ಯಾದನೆ ತೋಟದಲ್ಲಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಮರಳುತ್ತಿದ್ದ ಅನಿಲ್ ಮೇಲೆ ಕಾಡಾನೆ ದಾಳಿ ಮಾಡಿ, ಆತ ಸ್ಥಳದಲ್ಲೇ ಸಾವನ್ನಪ‍್ಪಿದ ಘಟನೆ, ತಾಯಿ ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಉಸಿರು ಕಟ್ಟುವಂತೆ ಅತ್ತು ಕರೆಯುತ್ತಿದ್ದ ದೃಶ್ಯ, ಹಿಂದೆಯೂ ಇಂತಹ ನೂರು ಘಟನೆಗಳು ನಡೆದಿವೆ.
ಇದಕ್ಕೊಂದು ಶಾಶ್ವತ ಪರಿಹಾರ ಆಗಲೇ ಬೇಕು ಎಂದು ಪ್ರತಿಭಟನೆ ಮಾಡುವವರ ಮೇಲೆ ದಯವಿಟ್ಟು ಪ್ರಕರಣಗಳನ್ನು ದಾಖಲಿಸಬೇಡಿ.‘ ಜನಪ್ರತಿನಿಧಿಗಳು, ಅಧಿಕಾರಿಗಳು, ಬೆಳೆಗಾರ ಸಂಘಟನೆಗಳು, ಇತರ ಸಂಘಟನೆಗಳು, ಸಾರ್ವಜನಿಕರೆಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ಪರಿಹಾರ ಹುಡುಕುವ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಒಂದೇ ಆಗಿರಬೇಕು. ಎಷ್ಟೋ ಹೋರಾಟಗಳಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳಿಂದ ಹೋರಾಟದ ಮೂಲ ಉದ್ದೇಶವೇ ನಾಶವಾಗಿ ಕೊನೆಗೆ ರಾಜಕೀಯಕ್ಕೆ ತಿರುಗಿ ಸಮಸ್ಯೆ ಪರಿಹಾರದ ಬದಲು ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳುವುದೇ ಇತ್ತೀಗೆ ಹೆಚ್ಚಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು, ಮುಂದೆ ಯಾವುದೇ ಜೀವ ಹಾನಿ ಆಗದಂತೆ ತಡೆಯಲು, ಒಂದು ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BR3b3qhWZWaCzpD1m6N5uu