ಶಬರಿಮಲೆಗೆ ಹೋಗುವ ಮುನ್ನ ಪತ್ನಿಯ ಕೊಲೆ: ಎರಡನೇ ಮದುವೆ ಪ್ರಶ್ನಿಸಿದಾಕೆಯನ್ನು ಕೊಂದು ನದಿಗೆ ಎಸೆದ ಪತಿ
ಹಾಸನ: ತನ್ನ ಎರಡನೇ ಮದುವೆಯನ್ನು ಪ್ರಶ್ನಿಸಿದ ಮೊದಲ ಪತ್ನಿಯನ್ನು ಪತಿಯೇ ಕೊಲೆ ಮಾಡಿ, ಮೃತದೇಹವನ್ನು ನದಿಗೆ ಎಸೆದಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ಕೊಲೆಯಾದ ಮಹಿಳೆಯನ್ನು ರಾಧಾ (40) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರಾಧಾ ಅವರು ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ದೂರವಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಇತ್ತೀಚೆಗೆ ಕುಮಾರ್ ಅಯ್ಯಪ್ಪ ವೃತಧಾರಿ ಮಾಲೆ ಧರಿಸಿದ್ದು, ಶಬರಿಮಲೆಗೆ ಹೋಗಲು ಇರುಮುಡಿ ಕಟ್ಟುವ ಸಂದರ್ಭದಲ್ಲಿ ಪತ್ನಿಯ ಸ್ಥಾನದಲ್ಲಿ ಬೇರೊಬ್ಬ ಮಹಿಳೆ ಪೂಜೆ ಸಲ್ಲಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಜ.10ರಂದು ರಾಧಾ ಅವರು ಪತಿಯನ್ನು ಪ್ರಶ್ನಿಸಲು ಯಡೂರಿಗೆ ಬಂದಿದ್ದರು. ಈ ವೇಳೆ ದಂಪತಿಗಳ ನಡುವೆ ತೀವ್ರ ಜಗಳ ನಡೆದಿದೆ.
ಜಗಳದ ಸಂದರ್ಭದಲ್ಲಿ ಕುಮಾರ್ ಮತ್ತು ಆತನ ಮನೆಯವರು ಸೇರಿ ರಾಧಾರನ್ನು ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹತ್ಯೆಯ ನಂತರ ಕುಮಾರ್ ಶವವನ್ನು ಹಾಸನ ಸಮೀಪದ ಕಂದಲಿ ಬಳಿಯ ಯಗಚಿ ನದಿಗೆ ಎಸೆದಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಪೊಲೀಸರು ಮತ್ತು ಈಜುಗಾರರ ತಂಡ ಯಗಚಿ ನದಿಯಲ್ಲಿ ಮಂಗಳವಾರ ತಪಾಸಣೆ ನಡೆಸಿದ್ದು, ರಾಧಾ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























