5:11 AM Wednesday 15 - October 2025

ಯುವತಿಯ ಮೇಲಿನ ಕೋಪಕ್ಕೆ 7 ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ ಯುವಕ!

car
16/07/2021

ಬೆಂಗಳೂರು: ನಿನ್ನ ಪ್ರೀತಿ ಬೇಡ ಎಂದು ಯುವತಿ ಹೇಳಿದಳೆಂಬ ಕಾರಣಕ್ಕೆ  ತೀವ್ರ ಆಕ್ರೋಶಕ್ಕೊಳಗಾದ ಯುವಕನೊಬ್ಬ ಏಳು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಯನ್ನುಂಟು ಮಾಡಿದ್ದಾನೆ.

ಬಸವೇಶ್ವರನಗರ ಠಾಣೆ ವ್ಯಾಪ್ತಿಯ ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ಗುರುವಾರ ತಡರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸತೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೆ.ಸಿ.ನಗರದ ಸತೀಶ್, ಪೀಠೋಪಕರಣ ಕೆಲಸ ಮಾಡುತ್ತಿದ್ದ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆತ, ಅವಳೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಹೀಗಾಗಿ, ಯುವತಿ ಪ್ರೀತಿ ಬೇಡವೆಂದು ಹೇಳಿದ್ದರು.

ಯುವತಿಯ ಮಾತಿನಿಂದ ತೀವ್ರ ಆಕ್ರೋಶಕ್ಕೀಡಾಗಿದ್ದ ಯುವಕ ಗುರುವಾರ ರಾತ್ರಿ ಆಕೆಯ ಮನೆಯ ಬಳಿ ಹೋಗಿ ಗಲಾಟೆ ಮಾಡಿ ಬಂದಿದ್ದು, ಈ ವೇಳೆ ಪೈಪ್ ಲೈನ್ ರಸ್ತೆಯ ಎರಡು ಬದಿಯಲ್ಲಿ ನಿಲ್ಲಿಸಲಾಗಿದ್ದ 7 ಕಾರುಗಳ ಮೇಲೆ ಆರೋಪಿ ಕಲ್ಲು ತೂರಾಟ ನಡೆಸಿದ್ದಾನೆ ಎಂದು ವರದಿಯಾಗಿದೆ.

ಯುವಕನ ಕಲ್ಲಿನ ದಾಳಿಯಿಂದ ಕಾರಿನ ಗಾಜುಗಳು ಪುಡಿಯಾಗಿವೆ. ಪ್ರೀತಿಯಲ್ಲಿ ಸಮಸ್ಯೆಯಾಗಿದ್ದಕ್ಕೆ ಈ ರೀತಿ ಮಾಡಿರುವುದಾಗಿ ಆತ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ

Exit mobile version