ಬಕೆಟ್ ನೀರಿನಲ್ಲಿ ಮುಳುಗಿ 11 ತಿಂಗಳ ಮಗು ಸಾವು, ನೊಂದ ತಾಯಿ ಆತ್ಮಹತ್ಯೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದೆ. ಆಟವಾಡುತ್ತಿದ್ದ 11 ತಿಂಗಳ ಮಗು ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮಗುವಿನ ಸಾವಿನಿಂದ ಮನನೊಂದ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ದಾರುಣ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಪ್ರತಿಭಾ (29) ಮತ್ತು ಅವರ 11 ತಿಂಗಳ ಪುತ್ರ ಅಗಸ್ತ್ಯ ಮೃತಪಟ್ಟ ದುರ್ದೈವಿಗಳು.
ಪ್ರತಿಭಾ ಅವರು ಮನೆಯಿಂದಲೇ ಕೆಲಸ (Work From Home) ಮಾಡುತ್ತಿದ್ದರು. ಗುರುವಾರ ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಅವರು ಮೇಲೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಈ ಸಮಯದಲ್ಲಿ ಮಗು ತೆವಳುತ್ತಾ ಬಚ್ಚಲು ಮನೆಗೆ ಹೋಗಿದ್ದು, ಅಲ್ಲಿದ್ದ ನೀರಿನ ಬಕೆಟ್ ನಲ್ಲಿ ಮುಳುಗಿದೆ. ಪ್ರತಿಭಾ ಅವರು ಕೆಳಗೆ ಬರುವಷ್ಟರಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿತ್ತು.
ಕಣ್ಮುಂದೆಯೇ ಮಗು ಪ್ರಾಣ ಕಳೆದುಕೊಂಡಿದ್ದನ್ನು ಕಂಡು ತೀವ್ರ ಆಘಾತಕ್ಕೊಳಗಾದ ಪ್ರತಿಭಾ, ಮಗುವಿನ ಸಾವಿಗೆ ತಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ನೊಂದಿದ್ದಾರೆ. ಪತಿ ಮಹಾಂತೇಶ್ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಪ್ರತಿಭಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಪ್ರತಿಭಾ ಅವರು ಡೆತ್ ನೋಟ್ ಬರೆದಿದ್ದು, ಅದರಲ್ಲಿ “ನನ್ನ ಮಗುವಿನ ಸಾವಿಗೆ ನಾನೇ ಕಾರಣ, ಅವನನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಸಾಯುತ್ತಿದ್ದೇನೆ” ಎಂದು ಮನಮಿಡಿಯುವಂತೆ ಬರೆದಿದ್ದಾರೆ. ಅಲ್ಲದೆ, ಸಾಯುವ ಮುನ್ನ ಅವರು ಮಾತ್ರೆಗಳನ್ನು ಸೇವಿಸಿ, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಕೊನೆಗೆ ಅದು ಸಾಧ್ಯವಾಗದಿದ್ದಾಗ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ.
ಸ್ಥಳಕ್ಕೆ ಚಂದ್ರಾಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಂದೇ ಕುಟುಂಬದ ಇಬ್ಬರ ಸಾವು ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಮೂಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























