ಚಿಕ್ಕಮಗಳೂರು: ತೆಂಗಿನಕಾಯಿ ಕದ್ದ ಆರೋಪ – ಮಹಿಳೆ ಮೇಲೆ ಮೂವರಿಂದ ತೀವ್ರ ಹಲ್ಲೆ!
ಚಿಕ್ಕಮಗಳೂರು / ಕಡೂರು: ತೋಟದಲ್ಲಿ ತೆಂಗಿನಕಾಯಿ ಕಳ್ಳತನ ಮಾಡಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮೂವರು ಪುರುಷರು ಸೇರಿ ಮಹಿಳೆಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಕಡೂರು ತಾಲೂಕಿನ ಯಗಟಿ ಸಮೀಪದ ಪಾತೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಪಾತೇನಹಳ್ಳಿ ಗ್ರಾಮದ ಶಿವಮ್ಮ (32) ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮ್ಮ ಅವರು ಗ್ರಾಮದ ಪಾಳುಬಿದ್ದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದರು. ಬಳಿಕ ತೋಟದ ಮಾರ್ಗವಾಗಿ ಬೇರೆ ಜಾಗಕ್ಕೆ ತೆರಳುತ್ತಿದ್ದಾಗ, ಕೈಯಲ್ಲಿದ್ದ ತೆಂಗಿನಕಾಯಿಯನ್ನು ಕಂಡ ತೋಟದ ಮಾಲೀಕ ನವೀನ್ ಎಂಬಾತ “ಇದು ನಮ್ಮದೇ ತೋಟದ ತೆಂಗಿನಕಾಯಿ” ಎಂದು ಆರೋಪಿಸಿದ್ದಾನೆ. ಅಲ್ಲದೆ “ನಾನು ಕರೆದಾಗ ಬರುವುದಿಲ್ಲ, ತೆಂಗಿನಕಾಯಿ ಕೊಂಡೊಯ್ಯುತ್ತೀಯಾ?” ಎಂದು ಆಕ್ರೋಶಗೊಂಡು ಜಗಳ ತೆಗೆದಿದ್ದಾನೆ.
ಮಾತಿಗೆ ಮಾತು ಬೆಳೆದು ನವೀನ್, ಕಲ್ಲೇಶ್ ಹಾಗೂ ದೀಪು ಎಂಬ ಮೂವರು ಸೇರಿ ಶಿವಮ್ಮ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯ ಬಟ್ಟೆ ಹರಿದು, ನೆಲಕ್ಕೆ ಹಾಕಿ ಕಾಲಿನಿಂದ ತುಳಿದು ಅಮಾನವೀಯವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ಶಿವಮ್ಮ ನೀಡಿದ ದೂರಿನನ್ವಯ ಆರೋಪಿಗಳಾದ ನವೀನ್, ಕಲ್ಲೇಶ್ ಮತ್ತು ದೀಪು ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























