ವೈನ್ ಶಾಪ್ ಗೆ ನುಗ್ಗಿ ದಾಂಧಲೆ ನಡೆಸಿದ ಚಿರತೆ: ಇಬ್ಬರಿಗೆ ಗಾಯ | ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!
ಟೋಂಕ್ (ರಾಜಸ್ಥಾನ): ರಾಜಸ್ಥಾನದ ಟೋಂಕ್ ಜಿಲ್ಲೆಯ ತೋಡಾರಾಯ್ ಸಿಂಗ್ ಪಟ್ಟಣದಲ್ಲಿ ವೈನ್ ಶಾಪ್ಗೆ ನುಗ್ಗಿದ ಚಿರತೆಯೊಂದು ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ವೈನ್ ಶಾಪ್ ಹೊರಗಡೆ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಚಿರತೆ ಮೊದಲು ದಾಳಿ ನಡೆಸಿದೆ. ಬಳಿಕ ಏಕಾಏಕಿ ಅಂಗಡಿಯೊಳಗೆ ನುಗ್ಗಿ ಅಲ್ಲಿದ್ದ ಸೇಲ್ಸ್ ಮ್ಯಾನ್ ಮೇಲೆಯೂ ದಾಳಿ ನಡೆಸಿದೆ. ಈ ದಿಢೀರ್ ದಾಳಿಯಿಂದಾಗಿ ಅಂಗಡಿಯಲ್ಲಿದ್ದ ಗ್ರಾಹಕರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಕಾಲ್ತುಳಿತದ ವಾತಾವರಣ ನಿರ್ಮಾಣವಾಗಿತ್ತು.
ದಾಳಿಯಲ್ಲಿ ಗಾಯಗೊಂಡ ಇಬ್ಬರನ್ನೂ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಕಾರ್ಯಾಚರಣೆ:
🚨SHOCKING | Leopard attacks man working at a liquor shop in Rajasthan’s Tonk pic.twitter.com/E3Fm9TczuR
— The Tatva (@thetatvaindia) July 20, 2026
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರೆದರು. ಚಿರತೆ ಸೆರೆಹಿಡಿಯಲು ಜೈಪುರ ಮೃಗಾಲಯದ ವಿಶೇಷ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ, ಸುಮಾರು 4 ರಿಂದ 5 ವರ್ಷ ಪ್ರಾಯದ ಚಿರತೆಗೆ ಅರವಳಿಕೆ ಮದ್ದು (Tranquiliser) ನೀಡಿ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಚಿರತೆ ವೈನ್ ಶಾಪ್ ಗೆ ನುಗ್ಗಿದ ಹಾಗೂ ದಾಳಿ ನಡೆಸಿದ ಸಂಪೂರ್ಣ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಾಡುಪ್ರಾಣಿ ಪಟ್ಟಣ ಪ್ರದೇಶಕ್ಕೆ ಹೇಗೆ ಬಂದಿತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























