ಫಿಫಾ ವಿಶ್ವಕಪ್ ಫೈನಲ್ ಕ್ರೇಜ್: ನಾಳೆ ಕೇರಳದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!
ತಿರುವನಂತಪುರಂ: ವಿಶ್ವವೇ ಕಾತರದಿಂದ ಕಾಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ನ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ, ಕೇರಳ ಸರ್ಕಾರವು ನಾಳೆ (ಜುಲೈ 20, ಸೋಮವಾರ) ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದೆ.
ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ನಿರ್ದೇಶನದ ಮೇರೆಗೆ ಪ್ರೊಫೆಷನಲ್ ಕಾಲೇಜುಗಳು ಸೇರಿದಂತೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಲ್ಲದೆ, ಈ ರಜೆಯು ಕೇಂದ್ರೀಯ ವಿದ್ಯಾಲಯಗಳಿಗೂ (ಕೆವಿ) ಅನ್ವಯಿಸಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ತಡರಾತ್ರಿ ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ಪ್ರಶಸ್ತಿಗಾಗಿ ಮಹಾ ಸಮರ ನಡೆಯುತ್ತಿದ್ದು, ಈ ಪಂದ್ಯವು ಸೋಮವಾರ ಮುಂಜಾನೆಯವರೆಗೂ ಮುಂದುವರಿಯಲಿದೆ. ಕೇರಳದಲ್ಲಿ ಫುಟ್ಬಾಲ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ರಾತ್ರಿಯಿಡೀ ಜಾಗರಣೆ ಮಾಡಿ ಪಂದ್ಯ ವೀಕ್ಷಿಸುವುದರಿಂದ ಸೋಮವಾರ ಬೆಳಗ್ಗೆ ತೀವ್ರ ಆಯಾಸಗೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಅವರ ಕ್ರೀಡಾ ಉತ್ಸಾಹವನ್ನು ಗೌರವಿಸಿ ಈ ರಜೆ ಘೋಷಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಸಾರ್ವಜನಿಕ ಶಿಕ್ಷಣ ಸಚಿವ ಎನ್. ಶಂಸುದ್ದೀನ್, “ಮಕ್ಕಳೇ, ಸಂತೋಷವಾಯಿತೇ? ಇಂದು ತಡರಾತ್ರಿ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯ ನಡೆಯುತ್ತಿರುವುದರಿಂದ, ಕ್ರೀಡಾ ಪ್ರೇಮಿಗಳಾದ ವಿದ್ಯಾರ್ಥಿಗಳ ವಿನಂತಿಯನ್ನು ಪುರಸ್ಕರಿಸಿ ನಾಳೆ (ಜುಲೈ 20) ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲಾಗಿದೆ,” ಎಂದು ಬರೆದುಕೊಂಡಿದ್ದಾರೆ.
ಮಂಗಳವಾರದಿಂದ (ಜುಲೈ 21) ಎಂದಿನಂತೆ ಎಲ್ಲಾ ಶಾಲಾ–ಕಾಲೇಜುಗಳು ಪುನರಾರಂಭಗೊಳ್ಳಲಿವೆ. ಸರ್ಕಾರದ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























