ಹುಬ್ಬಳ್ಳಿ: ಅತ್ಯಾಚಾರದಿಂದ ಮಗುವಿಗೆ ಜನ್ಮ ನೀಡಿದ್ದ ಅಪ್ರಾಪ್ತ ಬಾಲಕಿ ಮತ್ತೆ ಗರ್ಭಿಣಿ; ತನಿಖೆ ಆರಂಭ!
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಆಘಾತಕಾರಿ ಪ್ರಕರಣಗಳ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ಮತ್ತೊಂದು ಅತ್ಯಂತ ಗಂಭೀರ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದ 15 ವರ್ಷದ ಅಪ್ರಾಪ್ತ ಬಾಲಕಿ ಇದೀಗ ಒಂದು ವರ್ಷದ ಒಳಗಾಗಿ ಮತ್ತೆ ಗರ್ಭಿಣಿಯಾಗಿದ್ದು, ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪೋಕ್ಸೊ (POCSO) ಪ್ರಕರಣ ದಾಖಲಾಗಿದೆ.
ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ. 2025 ರಲ್ಲಿ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ರೈಲ್ವೆ ನಿಲ್ದಾಣದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಈ ಘಟನೆಯಿಂದ ಗರ್ಭಿಣಿಯಾಗಿದ್ದ ಬಾಲಕಿ ಬಳಿಕ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಇದೀಗ ಇದೇ ವರ್ಷದ ಮೇ ತಿಂಗಳಲ್ಲಿ ಬಾಲಕಿಯ ಮೇಲೆ ಅದೇ ಆರೋಪಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಇದರ ಪರಿಣಾಮವಾಗಿ ಬಾಲಕಿ ಮತ್ತೆ ಗರ್ಭಿಣಿಯಾಗಿದ್ದಾಳೆ.
ಒಂದೇ ಕುಟುಂಬದ ಇಬ್ಬರು ಅಪ್ರಾಪ್ತೆಯರು:
ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿ ಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ, ಈ ಪ್ರಕರಣದ ತನಿಖೆ ನಡೆಸುವಾಗ ಅದೇ ಕುಟುಂಬದ ಮತ್ತೊಬ್ಬ ಸಹೋದರಿಯ ಮಗಳೂ (ಅಪ್ರಾಪ್ತ ವಯಸ್ಸಿನ ಬಾಲಕಿ) ಸಹ ಈ ಹಿಂದೆ ಮಗುವಿಗೆ ಜನ್ಮ ನೀಡಿರುವುದು ಪತ್ತೆಯಾಗಿದೆ. ಈ ಇಬ್ಬರೂ ಬಾಲಕಿಯರ ಪ್ರಕರಣಗಳು ಅತ್ಯಂತ ಗಂಭೀರವಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮಗು ಮಾರಾಟದ ಶಂಕೆ?
ಬಾಲಕಿಗೆ ಜನಿಸಿದ ಮೊದಲ ನವಜಾತ ಶಿಶುವನ್ನು ಪೋಷಕರು ಅಪರಿಚಿತ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಬಾಲಕಿಯ ಕುಟುಂಬಸ್ಥರು, ಮಗು ಅಸ್ವಸ್ಥವಾಗಿದ್ದು ಕಾರವಾರದಲ್ಲಿ ಸಂಬಂಧಿಕರೊಂದಿಗೆ ಚಿಕಿತ್ಸೆ ಪಡೆಯುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಇಬ್ಬರೂ ಬಾಲಕಿಯರು ವೈದ್ಯಕೀಯ ವೀಕ್ಷಣೆಯಲ್ಲಿದ್ದು, ಸುರಕ್ಷಿತವಾಗಿದ್ದಾರೆ. ಆದರೆ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿರುವುದರಿಂದ ಅವರು ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಆರೋಪಿಗಳ ಹೆಸರು ಹೇಳಲು ಬಾಲಕಿಯರು ಹಾಗೂ ಅವರ ಪೋಷಕರು ಸದ್ಯಕ್ಕೆ ಮುಂದೆ ಬಂದಿಲ್ಲ. ಹೀಗಾಗಿ ಪೊಲೀಸರು ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದು, ಘಟನೆಗೆ ಕಾರಣರಾದ ಕಾಮುಕರನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























