ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

h d devegowda wife channamma
18/07/2026

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ (85 ವರ್ಷ) ಅವರು ಶನಿವಾರ (ಜುಲೈ 18) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಎರಡು ಮೂರು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಬುಧವಾರ (ಜುಲೈ 15) ದಿಢೀರ್ ಏರುಪೇರು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಮಣಿಪಾಲ್ ಆಸ್ಪತ್ರೆಯ ಐಸಿಯುಗೆ ದಾಖಲಿಸಿ, ತಜ್ಞ ವೈದ್ಯರಾದ ಡಾ. ಸತ್ಯನಾರಾಯಣ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಮೂಲದವರಾದ ಚನ್ನಮ್ಮ ಅವರು 1954 ಮೇ 25 ರಂದು ಹೆಚ್.ಡಿ. ದೇವೇಗೌಡರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದಾ ರಾಜಕೀಯ ಕಾರ್ಯಕಲಾಪಗಳಲ್ಲಿ ಬ್ಯುಸಿಯಾಗಿದ್ದ ದೇವೇಗೌಡರಿಗೆ ಕುಟುಂಬದ ಯಾವುದೇ ಹೊರೆ ಬೀಳದಂತೆ ಇಡೀ ಸಂಸಾರವನ್ನು ನಿಭಾಯಿಸಿದ ಗಟ್ಟಿಗಿತ್ತಿ ಇವರಾಗಿದ್ದರು.

ಅಂದಿನ ಕಾಲದಲ್ಲೇ ಎಸ್‌ ಎಸ್‌ ಎಲ್‌ ಸಿವರೆಗೆ ಶಿಕ್ಷಣ ಮುಗಿಸಿದ್ದ ಚನ್ನಮ್ಮ ಅವರು, ತಮ್ಮ ತಂದೆ–ತಾಯಿಯ ಹಿರಿಯ ಮಗಳಾಗಿ ನಾಲ್ವರು ತಮ್ಮಂದಿರು ಹಾಗೂ ಮೂವರು ತಂಗಿಯರಿಗೆ ತಾಯಿಯಂತೆ ಆಸರೆಯಾಗಿದ್ದರು. ಮದುವೆಯ ನಂತರ ಹೆಚ್.ಡಿ.ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ ಎಂಬ ನಾಲ್ವರು ಗಂಡು ಮಕ್ಕಳು ಹಾಗೂ ಶೈಲಜಾ ಮತ್ತು ಅನಸೂಯಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಒಳಗೊಂಡಂತೆ ಒಟ್ಟು ಆರು ಮಕ್ಕಳನ್ನು ಸಾಕಿ ಸಲಹಿ, ಉನ್ನತ ಶಿಕ್ಷಣ ಕೊಡಿಸುವ ಮೂಲಕ ಆದರ್ಶ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು.

ಆ್ಯಸಿಡ್ ದಾಳಿ:

2001ರ ಫೆಬ್ರವರಿಯಲ್ಲಿ ಹಾಸನ ಜಿಲ್ಲೆಯ ಹರದನಹಳ್ಳಿಯ ದೇವಾಲಯವೊಂದರಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದಾಗ ಚನ್ನಮ್ಮ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಈ ಭೀಕರ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರೂ ಸಹ, ಧೃತಿಗೆಡದೆ ದೀರ್ಘಕಾಲದ ಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖರಾಗಿ ಮರಳಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಸುದೀರ್ಘ ರಾಜಕೀಯ ಏಳುಬೀಳುಗಳ ಪ್ರಯಾಣದಲ್ಲಿ ಸದಾ ನೆರಳಾಗಿ ನಿಂತಿದ್ದ ಚನ್ನಮ್ಮ ಅವರ ನಿಧನಕ್ಕೆ ನಾಡಿನ ಗಣ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರು ತೀವ್ರ ಕಂಬನಿ ಮಿಡಿದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version