ಮಹಿಳೆಯ ಸಲ್ವಾರ್ ತೆಗೆದು ಎದೆ ಒತ್ತಿರುವುದು ಅತ್ಯಾಚಾರ ಯತ್ನವಲ್ಲ: ಪಟ್ನಾ ಹೈಕೋರ್ಟ್  ತೀರ್ಪು!

patna high court
15/07/2026

ಪಟ್ನಾ: ಮಹಿಳೆಯೊಬ್ಬಳ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು ಆಕೆಯ ಎದೆಯನ್ನು ಒತ್ತುವುದು ಅತ್ಯಾಚಾರದ ಯತ್ನ (Attempt to rape) ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ಶೀಲಭಂಗಕ್ಕೆ (Outraging modesty) ಯತ್ನಿಸಿದ ಅಪರಾಧವಾಗುತ್ತದೆಯೇ ವಿನಃ ಅತ್ಯಾಚಾರದ ಯತ್ನವಲ್ಲ ಎಂದು ಪಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಕೆಳ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.

‘ಬಾರ್ ಅಂಡ್ ಬೆಂಚ್’ ವರದಿ ಮಾಡಿರುವ ಪ್ರಕಾರ, ಈ ಘಟನೆಯು 2008 ರಲ್ಲಿ ಬಿಹಾರದ ಬಂಕಾ ಜಿಲ್ಲೆಯ ಅಮರಪುರದಲ್ಲಿರುವ ಫೋಟೋ ಸ್ಟುಡಿಯೋವೊಂದರಲ್ಲಿ ನಡೆದಿತ್ತು. ಸಂತ್ರಸ್ತೆ ತನ್ನ ತಂದೆಯ ಜೊತೆ ಫೋಟೋ ತೆಗೆಸಿಕೊಳ್ಳಲು ಸ್ಟುಡಿಯೋಗೆ ಹೋಗಿದ್ದಳು. ಫೋಟೋ ತೆಗೆದ ನಂತರ, ಕಂಪ್ಯೂಟರ್‌ ನಲ್ಲಿ ಫೋಟೋ ನೋಡುವುದಾಗಿ ಹೇಳಿ ಸಂತ್ರಸ್ತೆಯ ತಂದೆಯನ್ನು ಸ್ಟುಡಿಯೋ ಮಾಲೀಕ ಹೊರಗೆ ಕಳುಹಿಸಿದ್ದನು. ಬಳಿಕ ಒಳಗಿನಿಂದ ಬಾಗಿಲು ಹಾಕಿ, ಅತ್ಯಾಚಾರ ಎಸಗುವ ಉದ್ದೇಶದಿಂದ ಆಕೆಯ ಸಲ್ವಾರ್ ತೆಗೆಯಲು ಯತ್ನಿಸಿ, ಎದೆಯನ್ನು ಒತ್ತಿದ್ದ ಎನ್ನಲಾಗಿತ್ತು. ಸಂತ್ರಸ್ತೆಯ ಕಿರುಚಾಟ ಕೇಳಿ ತಂದೆ ಓಡಿ ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದನು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯವು ಆರೋಪಿಗೆ ಅತ್ಯಾಚಾರದ ಯತ್ನ ಮತ್ತು ಕಾನೂನುಬಾಹಿರ ಬಂಧನದ ಅಡಿಯಲ್ಲಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದನು.

ಪ್ರಕರಣದ ಮರುವಿಚಾರಣೆ ನಡೆಸಿದ ನ್ಯಾಯಮೂರ್ತಿ ಪೂರ್ಣೇಂದು ಸಿಂಗ್ ಅವರಿದ್ದ ಏಕಸದಸ್ಯ ಪೀಠ, ಪ್ರಾಸಿಕ್ಯೂಷನ್ ಹೊರಿಸಿರುವ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡರೂ ಸಹ, ಇದು ಐಪಿಸಿ ಸೆಕ್ಷನ್ 354 ರ ಅಡಿಯಲ್ಲಷ್ಟೇ ಅಪರಾಧವಾಗುತ್ತದೆ. ಆದರೆ ಸೆಕ್ಷನ್ 376/511 ರ ಅಡಿ ಅತ್ಯಾಚಾರದ ಯತ್ನ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಅತ್ಯಾಚಾರದ ಯತ್ನ ನಡೆದಿದೆ ಎನ್ನಲು ಯಾವುದೇ ವೈದ್ಯಕೀಯ ಪುರಾವೆಗಳು (Medical evidence) ಇಲ್ಲ.  ತನಿಖಾಧಿಕಾರಿಯನ್ನು ವಿಚಾರಣೆಯ ಸಮಯದಲ್ಲಿ ಸರಿಯಾಗಿ ಪ್ರಶ್ನಿಸಿಲ್ಲ ಮತ್ತು ಪ್ರಾಸಿಕ್ಯೂಷನ್ ಕೇವಲ ಸಂತ್ರಸ್ತೆ ಹಾಗೂ ಆಕೆಯ ಪೋಷಕರ ಹೇಳಿಕೆಗಳನ್ನಷ್ಟೇ ನೆಚ್ಚಿಕೊಂಡಿದೆ.

“ಕನಿಷ್ಠ ಮಟ್ಟದ ಲೈಂಗಿಕ ಸಂಪರ್ಕ ಅಥವಾ ಅತ್ಯಾಚಾರಕ್ಕೆ ನೇರವಾದ ಯತ್ನ ನಡೆದಿದೆ ಎನ್ನಲು ಯಾವುದೇ ಪುರಾವೆಗಳಿಲ್ಲದ ಕಾರಣ, ವೈದ್ಯಕೀಯ ದೃಢೀಕರಣವಿಲ್ಲದೆ ಐಪಿಸಿ ಸೆಕ್ಷನ್ 375 ಮತ್ತು 376 ರ ಅಂಶಗಳು ಇಲ್ಲಿ ಅನ್ವಯಿಸುವುದಿಲ್ಲ” ಎಂದು ಕೋರ್ಟ್ ಹೇಳಿದೆ.

ಆರೋಪಿಯ ಮೇಲಿನ ಅತ್ಯಾಚಾರ ಯತ್ನದ ಆರೋಪವನ್ನು ಪ್ರಾಸಿಕ್ಯೂಷನ್ ಸೂಕ್ತ ಪುರಾವೆಗಳೊಂದಿಗೆ ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ಆರೋಪಿಯನ್ನು ಖುಲಾಸೆಗೊಳಿಸಿದೆ. ಅಲ್ಲದೆ, ಆತ ಪಾವತಿಸಿದ್ದ ದಂಡದ ಮೊತ್ತವನ್ನು ಮರಳಿ ನೀಡುವಂತೆ ಸೂಚಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version