ಪರಪುರುಷನೊಂದಿಗೆ ಓಡಿ ಹೋದ ಪತ್ನಿ: ವಿದ್ಯುತ್ ಶಾಕ್ ನೀಡಿ ಇಬ್ಬರು ಮಕ್ಕಳನ್ನು ಕೊಂದು, ಆತ್ಮಹತ್ಯೆಗೆ ಶರಣಾದ ಪತಿ
ಚೆನ್ನೈ: ಪತ್ನಿ ತನ್ನನ್ನು ಬಿಟ್ಟು ಪರಪುರುಷನೊಂದಿಗೆ ಹೋಗಿದ್ದಾಳೆಂಬ ತೀವ್ರ ಬೇಸರ ಹಾಗೂ ಖಿನ್ನತೆಯಿಂದ ನೊಂದ 40 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಮಕ್ಕಳಿಗೆ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಅತ್ಯಂತ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪುದುಕೊಟ್ಟೈ ಬಳಿಯ ಸವೇರಿಯಾರ್ಪುರಂನಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಟ್ರಕ್ ಚಾಲಕ ಮೇರಿ ಮೈಕೆಲ್ (40), ಆತನ ಮಗಳು ಮೇರಿ ನಿರೋಷಾ (14) ಮತ್ತು ಮಗ ಮೇರಿ ಕೆನಿಸ್ಟನ್ (12) ಎಂದು ಗುರುತಿಸಲಾಗಿದೆ. ಮಕ್ಕಳಬ್ಬರೂ ಸ್ಥಳೀಯ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೇರಿ ಮೈಕೆಲ್ ಪತ್ನಿ ಸುಮಾರು ಆರು ತಿಂಗಳ ಹಿಂದೆ ಕುಟುಂಬವನ್ನು ತೊರೆದು ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು. ಇದರಿಂದಾಗಿ ಮೈಕೆಲ್ ತೀವ್ರ ಆಘಾತಕ್ಕೊಳಗಾಗಿದ್ದು, ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
ಕ್ರೂರವಾಗಿ ಮಕ್ಕಳ ಕೊಲೆ:
ಮಕ್ಕಳಿಬ್ಬರು ಗಾಢ ನಿದ್ರೆಯಲ್ಲಿದ್ದಾಗ ಮೈಕೆಲ್ ಅವರ ದೇಹದ ಸುತ್ತಲೂ ಸಡಿಲವಾದ ವಿದ್ಯುತ್ ತಂತಿಗಳನ್ನು ಸುತ್ತಿ ಕರೆಂಟ್ ಶಾಕ್ ಕೊಟ್ಟಿದ್ದಾನೆ. ಕರೆಂಟ್ ಹರಿದು ಇಬ್ಬರೂ ಮಕ್ಕಳು ನರಳಿ ಪ್ರಾಣ ಬಿಟ್ಟ ನಂತರ, ಮೈಕೆಲ್ ಅದೇ ತಂತಿಗಳನ್ನು ತನ್ನ ದೇಹಕ್ಕೂ ಸುತ್ತಿಕೊಂಡು ವಿದ್ಯುತ್ ಸ್ಪರ್ಶದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭಾನುವಾರ ಮಧ್ಯಾಹ್ನದವರೆಗೂ ಮನೆಯ ಬಾಗಿಲು ತೆರೆಯದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ಒಳಗೆ ಹೋದಾಗ ಹಾಸಿಗೆಯ ಮೇಲೆ ಮೂವರ ಶವಗಳು ವಿದ್ಯುತ್ ತಂತಿ ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸದ್ಯ ಪುದುಕೊಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೂತುಕುಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























