ಬಿ.ಸಿ. ರೋಡ್ ಘೋರ ದುರಂತ: ಏಕಮುಖ ಪ್ರೀತಿ ಹೆಸರಲ್ಲಿ ಯುವತಿಯನ್ನು ಕತ್ತಿಯಿಂದ ಕಡಿದು ಭೀಕರ ಕೊಲೆ!
ಬಿ.ಸಿ.ರೋಡ್: ಇಲ್ಲಿನ ಹೊಸ ಕೆಎಸ್ ಆರ್ ಟಿಸಿ(KSRTC) ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಭೀಕರ ಘಟನೆಯೊಂದು ಸಂಭವಿಸಿದೆ. ಮನೆಗೆ ಮರಳುತ್ತಿದ್ದ ಯುವತಿಯೊಬ್ಬಳನ್ನು ಯುವಕನೋರ್ವ ಕತ್ತಿಯಿಂದ ಅಟ್ಟಾಡಿಸಿ, ಅತ್ಯಂತ ಅಮಾನುಷವಾಗಿ ಕೊಲೆಗೈದಿದ್ದಾನೆ.
ಗುರುವಾರ ಸಂಜೆ ಸುಮಾರು 5:45 ರ ವೇಳೆಗೆ ಈ ರಕ್ತಸಿಕ್ತ ಕೃತ್ಯ ನಡೆದಿದ್ದು, ಇಡೀ ಬಸ್ ನಿಲ್ದಾಣವೇ ಒಂದು ಕ್ಷಣ ದಿಕ್ಕೆಟ್ಟು ಹೋಗುವಂತೆ ಮಾಡಿದೆ.
ಕೊಲೆಯಾದ ದುರ್ದೈವಿ ಯುವತಿಯನ್ನು ಕೇಳಿ ಗ್ರಾಮದ ಕಕ್ಕೆಪದವು ಸಮೀಪದ ಕೊಡಂಗೆ ನಿವಾಸಿ ಬಾಲಪ್ಪ ಗೌಡ ಎಂಬವರ ಪುತ್ರಿ ಲಾವಣ್ಯಾ (22) ಎಂದು ಗುರುತಿಸಲಾಗಿದೆ. ಈಕೆ ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ವ್ಯಾಪ್ತಿಯ ಒಡಿಲಾಳ ನಿವಾಸಿ ಪುರುಷೋತ್ತಮ ಗೌಡ ಎಂಬವರ ಪುತ್ರ ಚೇತನ್ ಎಂಬಾತನೇ ಕೊಲೆ ಆರೋಪಿ. ಈತ ಮೃತ ಯುವತಿಯ ದೂರದ ಸಂಬಂಧಿಯಾಗಿದ್ದು, ಆಕೆಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ.
ಲಾವಣ್ಯಾ ಅವರು ಎಂದಿನಂತೆ ಆಸ್ಪತ್ರೆಯ ಕೆಲಸ ಮುಗಿಸಿ, ಮನೆಗೆ ತೆರಳಲು ಕಕ್ಕೆಪದವು ಬಸ್ಸು ಹತ್ತಲೆಂದು ಬಿ.ಸಿ.ರೋಡ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಆಕೆಯನ್ನು ಹೊಂಚು ಹಾಕಿ ಹಿಂಬಾಲಿಸಿಕೊಂಡು ಬಂದಿದ್ದ ಚೇತನ್, ಇದ್ದಕ್ಕಿದ್ದಂತೆ ಮಾರಕಾಯುಧದಿಂದ ದಾಳಿ ನಡೆಸಿದ್ದಾನೆ. ಭಯದಿಂದ ಪ್ರಾಣಭಿಕ್ಷೆ ಬೇಡುತ್ತಾ ಓಡಿದ ಯುವತಿಯನ್ನು ಅಟ್ಟಾಡಿಸಿ, ಕತ್ತಿಯಿಂದ ಮನಬಂದಂತೆ ಕಡಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾವಣ್ಯಾಳನ್ನು ತಕ್ಷಣವೇ ಸ್ಥಳೀಯರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.
ಲಾವಣ್ಯಾಳನ್ನು ಅತ್ಯಂತ ಅಮಾನುಷವಾಗಿ ಹತ್ಯೆಗೈದ ಬಳಿಕ ಆರೋಪಿ ಚೇತನ್ ಸ್ಥಳದಿಂದ ಓಡಿ ಪರಾರಿಯಾಗುತ್ತಿದ್ದ ದೃಶ್ಯ ಬಸ್ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಕೆ. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಚೇತನ್ ನನ್ನು ಪತ್ತೆಹಚ್ಚಿ ಅರೆಸ್ಟ್ ಮಾಡಲು ಈಗಾಗಲೇ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಹುಡುಕಾಟ ತೀವ್ರಗೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























