21ನೇ ದಿನದ ಉಪವಾಸ: ಸೋನಮ್ ವಾಂಗ್ಚುಕ್ ವಿರುದ್ಧ ಬಲವಂತದ ಕ್ರಮ | ಜಂತರ್ ಮಂತರ್ ನಲ್ಲಿ ಗದ್ದಲ, ಗೊಂದಲ
ನವದೆಹಲಿ: ನೀಟ್ (NEET-UG) ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಸೂಕ್ತ ತನಿಖೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಶನಿವಾರ ಮುಂಜಾನೆ ದೆಹಲಿ ಪೊಲೀಸರು ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ 21ನೇ ದಿನಕ್ಕೆ ಕಾಲಿಟ್ಟಿದ್ದ ವೇಳೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ತೀವ್ರ ಗದ್ದಲ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮಳೆಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರದಂದು (ಜುಲೈ 20) ಸಂಸತ್ತಿಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಕೇವಲ 48 ಗಂಟೆಗಳು ಬಾಕಿ ಇರುವಾಗ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಬಿಳಿ ಚಾದರ ಹೊದಿಸಿ ಕಾರ್ಯಾಚರಣೆ!
ಭಾರಿ ಭದ್ರತೆಯ ನಡುವೆ ನಾಗರಿಕ ಉಡುಪಿನಲ್ಲಿ ಬಂದ ದೆಹಲಿ ಪೊಲೀಸರು, ಪ್ರತಿಭಟನಾ ವೇದಿಕೆಗೆ ನುಗ್ಗಿ ಇಡೀ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗದಂತೆ ತಡೆಯಲು ಸೋನಮ್ ವಾಂಗ್ಚುಕ್ ಮತ್ತು ಇಡೀ ವೇದಿಕೆಯನ್ನು ಬಿಳಿ ಚಾದರದಿಂದ ಮುಚ್ಚಿ, ಕೆಲವೇ ನಿಮಿಷಗಳಲ್ಲಿ ಅವರನ್ನು ಅಲ್ಲಿಂದ ಕರೆದೊಯ್ದರು. ಹೈಕೋರ್ಟ್ ಆದೇಶ ಹಾಗೂ ವೈದ್ಯರ ಸಲಹೆಯ ಮೇರೆಗೆ ವಾಂಗ್ಚುಕ್ ಅವರ ಆರೋಗ್ಯದ ಹಿತದೃಷ್ಟಿಯಿಂದ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ತಡೆಯೊಡ್ಡಲು ಯತ್ನಿಸಿದಾಗ ಲಘು ಘರ್ಷಣೆ ಸಂಭವಿಸಿದೆ.
ಆಕ್ರೋಶ ಹೊರಹಾಕಿದ ವಾಂಗ್ಚುಕ್ ಪತ್ನಿ
ಈ ಕುರಿತು ಪ್ರತಿಕ್ರಿಯಿಸಿರುವ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ, “ನನ್ನ ಅನುಮತಿಯಿಲ್ಲದೆ ಅವರಿಗೆ ಯಾವುದೇ ಚಿಕಿತ್ಸೆ ನೀಡಬಾರದು. ನಿನ್ನೆ ಅವರು ಆರೋಗ್ಯವಾಗಿಯೇ ಇದ್ದರು, ಅವರನ್ನು ಆಸ್ಪತ್ರೆಗೆ ಕರೆತರುವ ಯಾವುದೇ ಅಗತ್ಯವಿರಲಿಲ್ಲ. ಅವರಿಗೆ ಏನಾದರೂ ತೊಂದರೆಯಾದರೆ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡುತ್ತೇನೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ಮೋದಿಯವರ ರಾಜೀನಾಮೆಗೆ ಆಗ್ರಹ
ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಕ್ರಾಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು, ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, “ವಾಂಗ್ಚುಕ್ ಅವರನ್ನು ಕರೆದೊಯ್ದರೆ ಪ್ರತಿಭಟನೆ ನಿಲ್ಲುತ್ತದೆ ಎಂದು ಸರ್ಕಾರ ಭಾವಿಸಿದ್ದರೆ ಅದು ತಪ್ಪು. ಜುಲೈ 20 ರಂದು ನಾವು ಸಂಸತ್ ಮಾರ್ಚ್ ನಡೆಸಿಯೇ ತೀರುತ್ತೇವೆ. ಇದುವರೆಗೆ ನಾವು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೆವು, ಆದರೆ ಸರ್ಕಾರದ ಈ ದಬ್ಬಾಳಿಕೆಯ ನಂತರ ಈಗ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಒತ್ತಾಯಿಸುತ್ತೇವೆ,” ಎಂದು ಹೇಳಿ ತಾವೂ ಕೂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಸೋನಮ್ ವಾಂಗ್ಚುಕ್ ಅವರನ್ನು ಬಲವಂತವಾಗಿ ತೆರವುಗೊಳಿಸಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಆಮ್ ಆದ್ಮಿ ಪಾರ್ಟಿ (AAP), ತೃಣಮೂಲ ಕಾಂಗ್ರೆಸ್ (TMC) ಮತ್ತು ಎನ್ಸಿಪಿ ಸೇರಿದಂತೆ ಪ್ರಮುಖ ಪ್ರತಿಪಕ್ಷ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. “ಇದು ಗೂಂಡಾರಾಜ್ಯದ ಪರಮಾವಧಿ, ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ದಂಡದ ಪ್ರಯೋಗ ಮಾಡಲಾಗುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯರ ವರದಿಯ ಪ್ರಕಾರ, ಸುದೀರ್ಘ ಉಪವಾಸದಿಂದಾಗಿ ಸೋನಮ್ ವಾಂಗ್ಚುಕ್ ಅವರು ದೇಹದ ತೂಕ ಕಳೆದುಕೊಂಡು ನಿರಶನದಿಂದಾಗಿ ತೀವ್ರ ಸುಸ್ತಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಹಾಗೂ ನಿರಂತರ ನಿಗಾದಲ್ಲಿಡಲಾಗಿದೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























