11:33 PM Friday 5 - September 2025

ಜೆಎಲ್‌ ಆರ್ ಸಂಸ್ಥೆಗೆ 15 ಕೋಟಿಗಳಿಕೆ: ಆನಂದ್ ಸಿಂಗ್

anand singh
28/02/2023

ಜೆಎಲ್‌ಆರ್‌ನಿಂದ ರಾಜ್ಯದ ನಾಲ್ಕು ಕಡೆ ನೂತನ ರೆಸಾರ್ಟ್ ನಿರ್ಮಾಣ

ರೆಸಾರ್ಟ್ ನಲ್ಲಿ ಇರಲಿದೆ ಸರ್ಫಿಂಗ್ ಸ್ಕೂಲ್, ವಾಟರ್ ಸ್ಪೋರ್ಟ್ಸ್, ರೆಸ್ಟೋರೆಂಟ್

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡ ಪೂರಕ ಕ್ರಮದಿಂದಾಗಿ ಕೋವಿಡ್ ಬಳಿಕ ಚೇತರಿಸಿಕೊಂಡ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜೆಎಲ್‌ ಆರ್) ಪ್ರಸಕ್ತ ಸಾಲಿನಲ್ಲಿ 15 ಕೋಟಿ ರೂ.ಲಾಭಗಳಿಸಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಕೋವಿಡ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿತ್ತು. ಪ್ರವಾಸೋದ್ಯಮ ಇಲಾಖೆಯಿಂದ ಕೋವಿಡ್ ಸುರಕ್ಷಿತ ಕ್ರಮ ಕೈಗೊಂಡು ಪ್ರವಾಸಿಗರಲ್ಲಿ ವಿಶ್ವಾಸ ಮೂಡಿಸಲಾಗಿತ್ತು. ಪರಿಣಾಮ ಜೆಎಲ್‌ಆರ್ ಸಂಸ್ಥೆ ಪುನಃ ಲಾಭದತ್ತ ಮರಳಿದೆ. 2022-23ನೇ ಸಾಲಿನಲ್ಲಿ ಜೆಎಲ್‌ಆರ್ ಸಂಸ್ಥೆ 98.20 ಕೋಟಿ ರೂ. ವಹಿವಾಟು ನಡೆಸಿದ್ದು, 15 ಕೋಟಿ ರೂ. ಲಾಭಗಳಿಸಿದೆ ಎಂದು ತಿಳಿಸಿದರು.

ಮಂಚನಬೆಲೆಯಲ್ಲಿ ನೂತನ ರೆಸಾರ್ಟ್:

ಸಂಸ್ಥೆ ವತಿಯಿಂದ ಹೊಸದಾಗಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಕಡಲತೀರದಲ್ಲಿ ಅಂದಾಜು 7.50 ಕೋಟಿ ರೂ.ವೆಚ್ಚದಲ್ಲಿ ಸರ್ಫಿಂಗ್ ಸ್ಕೂಲ್, ರೆಸಾರ್ಟ್, ವಾಟರ್ ಸ್ಪೋರ್ಟ್ಸ್ ಮತ್ತು ರೆಸ್ಟೋರೆಂಟ್, 2.08 ಕೋಟಿ ವೆಚ್ಚದಲ್ಲಿ ಕಲ್ಬುರ್ಗಿಯ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ರೆಸಾರ್ಟ್, ವಾಟರ್ ಸ್ಪೋರ್ಟ್ಸ್, ಟ್ರೆಕ್ಕಿಂಗ್, 17.13 ಕೋಟಿ ರೂ.ವೆಚ್ಚದಲ್ಲಿ ಶಿವಮೊಗ್ಗ ಸಕ್ರೆಬೈಲಿನಲ್ಲಿ ಜೈವಿಕ ಉದ್ಯಾನವ ಅಭಿವೃದ್ಧಿ, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಒತ್ತಿನ್ನಾಣಿಯಲ್ಲಿ ಕಾಟೇಜ್‌ಗಳ ನಿರ್ಮಾಣ ಹಾಗೂ ರಾಮನಗರದ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಬಳಿ 10 ಎಕರೆ ಜಾಗದಲ್ಲಿ ಸಂಸ್ಥೆಯಿಂದ ಕಾಟೇಜ್, ವಾಟರ್ ಸ್ಪೋರ್ಟ್ಸ್, ರೆಸ್ಟೋರೆಂಟ್, ಟ್ರೆಕ್ಕಿಂಗ್, ಮೌಂಟನ್ ಕ್ಲೈಂಬಿಂಗ್ ಮತ್ತು ರಾಕ್ ಕ್ಲೈಂಬಿಂಗ್ ನಿರ್ಮಿಸಲಾಗುತ್ತದೆ ಎಂದರು.

ಇನ್ನು ಪ್ರಸ್ತುತ ಪ್ರವಾಸೋದ್ಯಮ ಇಲಾಖೆ, ಕೆಎಸ್‌ಟಿಡಿಸಿ ಹಾಗೂ ಜೆಎಲ್‌ಆರ್ ಸಂಸ್ಥೆಗಳು ಸ್ವಂತ ಕಟ್ಟಡ ಹೊಂದಿಲ್ಲದ ಕಾರಣ ಪ್ರತಿ ವರ್ಷ ಆರು ಕೋಟಿ ಕಟ್ಟಡಕ್ಕೆ ಬಾಡಿಗೆ ಪಾವತಿಸಲಾಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಹಲಸೂರಿನಲ್ಲಿ 12.36 ಕೋಟಿ ವೆಚ್ಚದಲ್ಲಿ ಜಾಗ ಖರೀಸಲಾಗಿದ್ದು, ‘ಪ್ರವಾಸಿ ಸೌಧ’ ನಿರ್ಮಿಸಲಾಗುವುದು. ಈ ಮೂಲಕ ಪ್ರವಾಸೋದ್ಯಮ ನಿರ್ದೇಶನಾಲಯ, ಕೆಎಸ್‌ಟಿಡಿಸಿ, ಕೆಟಿಐಎಲ್ ಮತ್ತು ಜೆ.ಎಲ್.ಆರ್ ಕಚೇರಿಗಳನ್ನು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು. ಅಲ್ಲದೆ, ಸದರಿ ಕಟ್ಟಡದಲ್ಲಿ ರಾಜ್ಯದ ಪ್ರವಾಸಕ್ಕಾಗಿ ಆಗಮಿಸುವ ಪ್ರವಾಸಿಗರಿಗೆ ಕೈಮಗ್ಗ ನೇಕಾರರು ತಯಾರಿಸಿದ ವಸ್ತುಗಳು, ಮೈಸೂರು ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಷನ್ ಮತ್ತು ಕರಕುಶಲ ನಿಗಮದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಸಚಿವರು ವಿವರಿಸಿದರು.

ಪ್ರವಾಸಿಗರಿಗೆ ಹೆಲಿಟೂರಿಸಂ: ಸಂಸ್ಥೆಯ ರೆಸಾರ್ಟ್ಸ್ ಗಳಿಗೆ ಭೇಟಿ ನೀಡುವ ಅತಿಥಿಗಳಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣದ ಸೇವೆ ಒದಗಿಸಲು ಮೆ.ಫ್ಲೈ ಬ್ಲೇಡ್ ಸಂಸ್ಥೆಯೊಂದಿಗೆ ಎರಡು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜೆಎಲ್‌ಆರ್‌ನಲ್ಲಿ ವಾಸ್ತವ್ಯ ಹೂಡುವ ಹೆಲಿಕಾಪ್ಟರ್ ಸೇವೆ ಪಡೆಯುವ ಅತಿಥಿಗಳಿಗೆ ಸಂಸ್ಥೆ ಪ್ರಯಾಣ ದರದಲ್ಲಿ ರಿಯಾಯಿತಿ ಸಿಗಲಿದೆ ಎಂದರು.

ಜೆಎಲ್‌ಆರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಕುಮಾರ್ ಮಾತನಾಡಿ, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಹಾಗೂ ಗುತ್ತಿಗೆ ನೌಕರರು ಹಾಗೂ ಕುಟುಂಬ ಸದಸ್ಯರಿಗೆ ಎಂಟು ಲಕ್ಷ ರೂ.ಗಳ ವೈದ್ಯಕೀಯ ವೆಚ್ಚ, 5 ಲಕ್ಷದ ಅಪಘಾತ ವಿಮೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿಪ್ರವಾಸೋದ್ಯಮ ಇಲಾಖೆ ನಿರ್ದೇಶಕ ವಿ.ರಾಮ್ ಪ್ರಸಾತ್ ಮನೋಹರ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಜೆಎಲ್‌ಆರ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

50 ಸಿಬ್ಬಂದಿ ಖಾಯಂ ನೇಮಕಾತಿಗೆ ಕ್ರಮ:

ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಲ್ಲಿ ರಾಜ್ಯದ ವಿವಿಧೆಡೆ ಜೆಎಲ್‌ಆರ್‌ನಲ್ಲಿ ಕಳೆದ 15- 20 ವರ್ಷಗಳಿಂದ ಇರುವ ನೌಕರರನ್ನು ಖಾಯಂ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

ಮೊದಲ ಹಂತದಲ್ಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 50 ನೌಕರರನ್ನು ಖಾಯಂ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇನ್ನು 2022-23ನೇ ಸಾಲಿನಲ್ಲಿ ಸಂಸ್ಥೆ 28 ಖಾಯಂ ನೌಕರರರಿಗೆ ಮುಂಬಡ್ತಿ ನೀಡಲಾಗಿದ್ದು, ಗುತ್ತಿಗೆ ನೌಕರರ ವೇತನವನ್ನು ಹೆಚ್ಚಳ ಮಾಡಲಾಗಿದೆ. ಒಟ್ಟಾರೆ, ನನಗೆ ಸಿಕ್ಕ ಕಡಿಮೆ ಅವಧಿಯಲ್ಲಿ ಇಲಾಖೆಗೆ ನ್ಯಾಯ ಒದಗಿಸಲಾಗಿದೆ ಎಂದರು.

15 ದಿನದಲ್ಲಿ ನಂದಿಬೆಟ್ಟಕ್ಕೆ ರೋಪ್ ವೇಗೆ ಚಾಲನೆ:

ಹದಿನೈದು ದಿನದಲ್ಲಿ ನಂದಿಬೆಟ್ಟದ ರೋಪ್-ವೇಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 98 ಕೋಟಿ ರೂ.ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತದೆ. ಖಾಸಗಿ ಸಂಸ್ಥೆ ರೋಪ್‌ವೇ ನಿರ್ಮಾಣದ ಹೊಣೆ ಹೊತ್ತಿದೆ.

ಇನ್ನು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ತುರ್ತಾಗಿ 20 ಕೋಟಿ ವೆಚ್ಚದಲ್ಲಿ ಶೀಘ್ರವೇ ವಸತಿ ಸೌಲಭ್ಯಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version