11:44 AM Tuesday 4 - November 2025

2ಬಿ ಮೀಸಲಾತಿ ಮರುಸ್ಥಾಪನೆ ಮಾಡದಿದ್ದಲ್ಲಿ ಕಾನೂನು ಹೋರಾಟ | ಕರ್ನಾಟಕ ರಾಜ್ಯ ಮುಸ್ಲಿಂ ಜನಾಂಗದ ಜಾಗೃತ ವೇದಿಕೆ ಎಚ್ಚರಿಕೆ

press club
31/03/2023

ಬೆಂಗಳೂರು:ರಾಜ್ಯದಲ್ಲಿ ಮುಸ್ಲಿಂ ಜನಾಂಗಕ್ಕೆ ಪ್ರವರ್ಗ 2(ಬಿ) ಯಲ್ಲಿದ್ದ ಮೀಸಲಾತಿಯನ್ನು ಏಕ ಪಕ್ಷೀಯವಾಗಿ ರದ್ದುಪಡಿಸಿರುವುದು ಅಸಾಂವಿಧಾನಿಕ ಮತ್ತು ಅವೈಜ್ಞಾನಿಕ ನಿರ್ಧಾರವಾಗಿದೆ. ಈ ಕುರಿತು ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಕರ್ನಾಟಕ ರಾಜ್ಯ ಮುಸ್ಲಿಂ ಜನಾಂಗದ ಜಾಗೃತ ವೇದಿಕೆ ಎಚ್ಚರಿಕೆ ನೀಡಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್, ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ನೆರೆಯ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ಆಧಾರವಾಗಿ ಇಟ್ಟುಕೊಂಡು ಮುಸ್ಲಿಮರಿಗೆ ಲಭ್ಯವಿದ್ದ ಮೀಸಲಾತಿ ರದ್ದುಪಡಿಸಿರುವುದಾಗಿ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಆದರೆ, ಈ ಕುರಿತಂತೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಅಲ್ಲದೆ, ಪರಿಷ್ಕರಿಸಿದ ಮೀಸಲಾತಿ ಆದೇಶ ಅಸಿಂಧುವಾಗುವಾಗಲಿದೆ ಎಂದು ತಿಳಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರು ಹಿಂದುಳಿದಿರುವುದನ್ನು ಪರಿಗಣಿಸಿಯೇ ವಿವಿಧ ಆಯೋಗಗಳ ವರದಿಯಂತೆ ಮೀಸಲಾತಿ ನೀಡಲಾಗಿತ್ತು. ಇದೀಗ ಆಯೋಗಗಳ ವರದಿಗಳನ್ನು ಬದಿಗಿಟ್ಟು ಮೀಸಲಾತಿ ಹಿಂಪಡೆದು ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿರುವುದು ಅತ್ಯಂತ ಕೆಟ್ಟ ಬೆಳವಣಿಗೆಯಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣಕ್ಕೆ 1916ನೇ ಸಾಲಿನಿಂದ ಹತ್ತಾರು ಆಯೋಗಗಳು, ವಿವಿಧ ಜಾತಿ ಜನಾಂಗಗಳಿಗೆ ಹಿಂದುಳಿದ, ಅತಿ ಹಿಂದುಳಿದ ವರ್ಗಗಳೆಂದು ಪರಿಗಣಿಸಿ ಮೀಸಲಾತಿ ನೀಡಲಾಗಿತ್ತು. ಆದರೆ ಇದೀಗ ಮುಸ್ಲಿಂ ಸಮುದಾಯದವರಿಗೆ 2(ಬಿ)ರಲ್ಲಿದ್ದ ಮೀಸಲಾತಿಯನ್ನು ರದ್ದುಪಡಿಸಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ ಎಂದು ತಿಳಿಸಿದರು.

ಈವರೆಗೂ ಯಾವುದೇ ಪ್ರವರ್ಗದಲ್ಲಿ ಮೀಸಲಾತಿ ಲಭ್ಯವಿರದಿದ್ದರೂ ಬ್ರಾಹ್ಮಣ, ವೈಶ್ಯ ಮತ್ತು ಸಿಖ್ ಜನಾಂಗದವರಿಗೆ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ. ಆರ್ಥಿಕವಾಗಿ ಮುಂದುವರಿದಿದ್ದರೂ 8 ಲಕ್ಷ ರೂ.ಗಳಷ್ಟು ವಾರ್ಷಿಕ ಆದಾಯ ನಿಗದಿಪಡಿಸಲಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ, ಮುಸ್ಲಿಂ ಜನಾಂಗಕ್ಕೆ ಮೀಸಲಾತಿ ರದ್ದು ಮಾಡಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿಯುವಂತೆ ಮಾಡಲು ಮುಂದಾಗಿರುವುದು ಕೆಟ್ಟ ಬೆಳವಣಿಗೆಯಾಗಿದೆ ಎಂದರು.

ಅಲ್ಲದೆ, ಸಂವಿಧಾನಾತ್ಮಕವಾಗಿ ಮುಸ್ಲಿಮರಿಗೆ ಈ ಹಿಂದೆ ಇದ್ದಂತಹ 2(ಬಿ) ಮೀಸಲಾತಿಯನ್ನು ಜನಸಂಖ್ಯೆ ಮತ್ತು ಆರ್ಥಿಕ ಸ್ಥಿತಿಗತಿಗಳ ಆಧಾರದಲ್ಲಿ ಮರು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು. ಜತೆಗೆ, ಈ ಕುರಿತು ಸರ್ಕಾರ ಪರುಪರಿಶೀಲನೆ ಮಾಡದಿದ್ದಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version