ಬೆಳ್ತಂಗಡಿ: ಆಸ್ಪತ್ರೆಗೆ ತೆರಳುವ ದಾರಿ ಮಧ್ಯೆ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಬೆಳ್ತಂಗಡಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ, ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.
ಘಟನೆಯ ವಿವರ:
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ನಿವಾಸಿ ಲೀಲಾವತಿ ಎಂಬವರೇ ಆಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ. ಇಂದು ಮುಂಜಾನೆ ಲೀಲಾವತಿಯವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರಿಂದ ವೈದ್ಯರು ಅವರನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.
ವೈದ್ಯರ ಸಲಹೆಯಂತೆ ಇಬ್ಬರು ಶುಶ್ರೂಷಕಿಯರೊಂದಿಗೆ ಆಸ್ಪತ್ರೆಯ ತುರ್ತು ವಾಹನದಲ್ಲಿ ಮಂಗಳೂರಿಗೆ ಲೀಲಾವತಿಯವರನ್ನು ಕರೆದೊಯ್ಯಲಾಗುತ್ತಿತ್ತು. ಆಂಬುಲೆನ್ಸ್ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪಿಸುತ್ತಿದ್ದಂತೆ ಲೀಲಾವತಿಯವರಿಗೆ ಹೆರಿಗೆ ನೋವು ತೀವ್ರಗೊಂಡಿದೆ.
ಶುಶ್ರೂಷಕಿಯರ ಸಮಯಪ್ರಜ್ಞೆ:
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆಂಬುಲೆನ್ಸ್‌ನಲ್ಲಿದ್ದ ಶುಶ್ರೂಷಕಿಯರಾದ ಸಿಸ್ಟರ್ ಕುಮುದಾ ಮತ್ತು ಸಿಸ್ಟರ್ ಸೌಮ್ಯಾ ಎಸ್. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ವಾಹನದಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ಲೀಲಾವತಿ ಅವರು ಸುಂದರ ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಆಂಬುಲೆನ್ಸ್ ಚಾಲಕ ದಿನೇಶ್ ಗೌಡ ಅವರು ಕೂಡ ಸಮಯಪ್ರಜ್ಞೆ ಮೆರೆದು, ಅತೀ ವೇಗವಾಗಿ ಲೇಡಿಗೋಷನ್ ಆಸ್ಪತ್ರೆಗೆ ತಲುಪಿಸುವ ಮೂಲಕ ಸಹಕರಿಸಿದರು. ಸಿಬ್ಬಂದಿಯ ಮಾನವೀಯ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























