ಐಐಟಿ-ಬಿಎಚ್ ಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಮೂವರು ಆರೋಪಿಗಳು ಬಿಜೆಪಿಯಿಂದ ಉಚ್ಚಾಟನೆ

ಐಐಟಿ-ಬಿಎಚ್ ಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಾರಣಾಸಿ ಪೊಲೀಸರು ಬಂಧಿಸಿದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮೂವರು ಕಾರ್ಯಕರ್ತರನ್ನು ಉಚ್ಚಾಟಿಸಿದೆ ಎಂದು ಪಕ್ಷದ ವಾರಣಾಸಿ ಜಿಲ್ಲಾ ಮುಖ್ಯಸ್ಥರು ಭಾನುವಾರ ತಿಳಿಸಿದ್ದಾರೆ.
ಆದರೆ, ವಾರಣಾಸಿ ಜಿಲ್ಲಾ ಮುಖ್ಯಸ್ಥ ಹಂಸರಾಜ್ ವಿಶ್ವಕರ್ಮ ಅವರು ಪಕ್ಷದಲ್ಲಿನ ಆರೋಪಿಗಳ ಹುದ್ದೆ ಮತ್ತು ಪಾತ್ರವನ್ನು ಬಹಿರಂಗಪಡಿಸಿಲ್ಲ.
ಆರೋಪಿಗಳು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ ಕೆಲವೇ ಗಂಟೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಪಕ್ಷದ ನಿರ್ಧಾರದ ಬಗ್ಗೆ ಮಾತನಾಡಿದ ವಿಶ್ವಕರ್ಮ, “ಖಂಡಿತವಾಗಿಯೂ ಅವರ (ಆರೋಪಿ) ಹೆಸರುಗಳು ಪೊಲೀಸ್ ತನಿಖೆಯಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ” ಎಂದು ಹೇಳಿದರು.
ಮೂವರು ಆರೋಪಿಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವಕರ್ಮ ಅವರು, ಇದು ಆರೋಪಿಗಳಿಂದ ದೂರವಿರುವ ಬಗ್ಗೆ ಅಲ್ಲ. ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು” ಎಂದು ಹೇಳಿದ್ದಾರೆ.