ಬೌದ್ಧ ಧಮ್ಮ ಸ್ವೀಕರಿಸಿದ 300 ದಕ್ಷಿಣ ಭಾರತೀಯರು

ಬೆಂಗಳೂರು: ಸದಾಶಿವನಗರದ ನಾಗಸೇನಾ ಬುದ್ಧ ವಿಹಾರದಲ್ಲಿ ಶನಿವಾರ ನಡೆದ ರಾಜ್ಯ ಬೌದ್ಧ ಯುವ ಸಮ್ಮೇಳನ, ಧಮ್ಮ ದೀಕ್ಷಾ ಸಮಾವೇಶದಲ್ಲಿ ದಕ್ಷಿಣ ಭಾರತದ ಸುಮಾರು 300ಕ್ಕೂ ಹೆಚ್ಚು ವಿವಿಧ ಜಾತಿಗಳ ಜನರು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ್ದಾರೆ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಧಮ್ಮ ದೀಕ್ಷೆ ಪಡೆದಿದ್ದಾರೆ. ನಾಗಪುರದ ಅಶೋಕ ಬೌದ್ಧ ವಿಹಾರದ ವಿನಯರಖ್ಖಿತ ಮಹಾಥೆರೋ ಅವರು ಅಂಬೇಡ್ಕರ್ ಅನುಸರಿಸಿದ್ದ 21 ಅಂಶಗಳನ್ನು ಬೋಧಿಸಿದರು.
ಭಾರತೀಯ ಬುದ್ಧಿಸ್ಟ್ ಸಂಘ, ಕರ್ನಾಟಕ ಬುದ್ಧ ಸಮಾಜ, ಸಮತಾ ಸೈನಿಕ ದಳ, ದಲಿತ ಸಂಘರ್ಷ ಸಮಿತಿ ಹಾಗೂ ಸಮ್ಯಕ್ ಸಂಘಟನೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಕಾರ್ಯಕ್ರಮವನ್ನು ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಅವರು 22 ವರ್ಷಗಳ ವರೆಗೆ ಬೌದ್ಧ ಧಮ್ಮದ ಕುರಿತಾಗಿ ಅಧ್ಯಯನ ನಡೆಸಿ, ಕೊನೆಗೆ ಅದೇ ಧಮ್ಮ ಸ್ವೀಕರಿಸಿದರು. ಅಂದಿನಿಂದ ಶೋಷಿತರು ಹೆಚ್ಚಿನ ಸಂಖ್ಯೆಯಲ್ಲಿ ಅವರ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದರು.