ತವರು ಮನೆಗೆ ಹೋದ ಪತ್ನಿಯ ಮೇಲೆ ಸಿಟ್ಟು: ಪತ್ನಿಯ ತವರು ಮನೆಗೆ ಮಾಟ ಮಾಡಿದ ಪತಿ: ಚಿಕ್ಕಮಗಳೂರಿನಲ್ಲೊಂದು ಹಾಸ್ಯಾಸ್ಪದ ಘಟನೆ

chikkamagaluru news
29/08/2023

ಕೊಟ್ಟಿಗೆಹಾರ:  ಪತ್ನಿ‌ ಪತಿ ಜೊತೆ ಜಗಳವಾಡಿದ್ದು, ಇದರಿಂದಾಗಿ ಪತ್ನಿ ತವರು ಮನೆಗೆ ಹೋಗಿದ್ದಾಳೆ. ತವರು ಮನೆಗೆ ಹೋದ ಪತ್ನಿಗೆ ಬುದ್ಧಿ ಕಲಿಸಬೇಕು ಅಂತ ಪತಿ ಪತ್ನಿಯ ತವರು ಮನೆಗೆ ಮಾಟ ಮಾಡಿಸಿರುವ ಹಾಸ್ಯಾಸ್ಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿ ಕಟ್ಟೆ ಗ್ರಾಮದಲ್ಲಿ ನಡೆದಿದೆ.

ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದ ಸತೀಶ್ ಎಂಬುವರು ತನ್ನ ತಂಗಿ ಸುಮಿತ್ರರನ್ನ 12 ವರ್ಷಗಳ ಹಿಂದೆ ಮರಸಣಿಗೆ ಗ್ರಾಮದ ಗುರುಮೂರ್ತಿ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಗಿನಿಂದಲೂ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು. ದೊಡ್ಡವರು ರಾಜಿ–ಪಂಚಾಯತಿ ಮಾಡುತ್ತಲೇ ಇದ್ದರು. ಕಳೆದ ಒಂದು ತಿಂಗಳ ಹಿಂದೆ ಗಂಡ ಹೆಂಡತಿ ಮಧ್ಯೆ ಮತ್ತೆ ಜಗಳವಾದ ಕಾರಣ ಸುಮಿತ್ರ ಅಣ್ಣನ ಮನೆ ಸೇರಿದ್ದಳು. ಇದರಿಂದ ಕೋಪಗೊಂಡ ಪತಿ ಗುರುಮೂರ್ತಿ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಸುಮಿತ್ರ ಅವರ ಅಣ್ಣ ಸತೀಶ್ ಮನೆಗೆ ಬಂದು ನನ್ನ ಹೆಂಡತಿಯನ್ನು ಕಳೆದುಕೊಂಡು ಬಂದಿದ್ದೀಯಾ. ನಿನ್ನನ್ನು ಬಿಡುವುದಿಲ್ಲ ಎಂದು ಯಾಕೋ ತೋರಿಸಿ ಕೊಲೆ ಬೆದರಿಕೆ ಹಾಕಿದ್ದನು. ಸತೀಶ್ ಕಿಟಕಿ ತೆಗೆದು ನೋಡಿದಾಗ ಗುರುಮೂರ್ತಿಯ ಕೂಗಾಟ ಕಾಣಿಸುತ್ತಿತ್ತು. ಕೂಡಲೇ ಸತೀಶ್ ಬಾಗಿಲು ತೆಗೆದು ಹೊರ ಬಂದಾಗ ಗುರುಮೂರ್ತಿ ಅಲ್ಲಿಂದ ಹೋಗಿದ್ದನು.

ಮತ್ತೆ ಬೆಳಗಿನ ಜಾವ 6 ಗಂಟೆಗೆ ಮನೆಯಿಂದ ಹೊರ ಬಂದಾಗ ಮನೆ ಮುಂದೆ ಯಾವುದೋ ಪ್ರಾಣಿಯ ರಕ್ತಚೆಲ್ಲಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಗುರುಮೂರ್ತಿ ತೋರಿಸಿದ್ದ  ಚಾಕುವನ್ನೂ ಅಲ್ಲೆ ಬಿಸಾಡಿ ಹೋಗಿದ್ದನು. ಮನೆಗೆ ವಾಮಾಚಾರ ಮಾಡಿಸಿ, ಕೊಲೆ ಬೆದರಿಕೆ ಹಾಕಿರುವ ತಂಗಿಯ ಗಂಡ ಗುರುಮೂರ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸತೀಶ್ ಬಣಕಲ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನ ಸ್ವೀಕರಿಸಿಕೊಂಡ ಬಣಕಲ್ ಪೊಲೀಸರು ಆರೋಪಿ ಗುರುಮೂರ್ತಿಯನ್ನ ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version