ಮಹಿಳಾ ಅಧಿಕಾರಿಯ ಖಾಸಗಿ ಕ್ಷಣ ಸೆರೆ ಹಿಡಿದು ಬ್ಲ್ಯಾಕ್ ಮೇಲ್: ಮೂವರು ಆರೋಪಿಗಳ ಬಂಧನ!
ಬೆಳಗಾವಿ: ಜಿಲ್ಲೆಯ ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳನ್ನು ಗುಪ್ತ ಕ್ಯಾಮರಾದಲ್ಲಿ ಸೆರೆಹಿಡಿದು, ಬರೋಬ್ಬರಿ 50 ಲಕ್ಷ ರೂಪಾಯಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ? ಬಂಧಿತ ಆರೋಪಿಗಳನ್ನು ಗೋಕಾಕ್ ಮೂಲದ ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಮತ್ತು ಮೊಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಇವರು ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿ ಅವರ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದರು. ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಸಿ 50 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು.
ಮನೆ ಕೆಲಸದವನ ಸಾಥ್: ಈ ಕೃತ್ಯಕ್ಕೆ ಮಹಿಳಾ ಅಧಿಕಾರಿಯ ಮನೆಯ ಕೆಲಸದವನೇ ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ. ಅಧಿಕಾರಿ ಇಲ್ಲದ ಸಮಯ ನೋಡಿ ಕಿಟಕಿಯಲ್ಲಿದ್ದ ಕೀಲಿಕೈ ಪಡೆದು ಆರೋಪಿಗಳಿಗೆ ಮನೆಯೊಳಗೆ ಹೋಗಲು ಈತ ದಾರಿ ಮಾಡಿಕೊಟ್ಟಿದ್ದ. ಆರೋಪಿಗಳು ಬೆಡ್‌ರೂಮ್ ಮತ್ತು ಹಾಲ್‌ನ ಬಲ್ಬ್ ಹೋಲ್ಡರ್‌ಗಳಲ್ಲಿ ಗುಪ್ತ ಕ್ಯಾಮರಾಗಳನ್ನು ಅಳವಡಿಸಿದ್ದರು.
ಪೊಲೀಸ್ ಕಾರ್ಯಾಚರಣೆ: ಬ್ಲ್ಯಾಕ್‌ಮೇಲ್ ಕಾಟ ತಾಳಲಾರದೆ ಮಹಿಳಾ ಅಧಿಕಾರಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಮಾಳಮಾರುತಿ ಪೊಲೀಸರು ಮೂವರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಆರು ರಹಸ್ಯ ಕ್ಯಾಮರಾಗಳು, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್ ಹಾಗೂ ಒಂದು ಇನ್ನೋವಾ ಕಾರನ್ನು ಜಪ್ತಿ ಮಾಡಲಾಗಿದೆ.
ಪ್ರಸ್ತುತ ತಲೆಮರೆಸಿಕೊಂಡಿರುವ ಮನೆ ಕೆಲಸದವನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಈ ಘಟನೆ ಭಾರೀ ಸಂಚಲನ ಮೂಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























