ಗ್ರಾಮ ಲೆಕ್ಕಾಧಿಕಾರಿ ಪರೀಕ್ಷಾ ಟಾಪರ್: ಅಭ್ಯರ್ಥಿಯ ಕಳ್ಳಾಟ ತನಿಖೆಯಲ್ಲಿ ಬಯಲು
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ ಗ್ರಾಮ ಲೆಕ್ಕಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ 151 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಂಕರ್ ಬನ್ನೂರು ಅವರ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿ ಗೂಗಲ್ ಲೆನ್ಸ್ (Google Lens) ಮೂಲಕ ಪ್ರಶ್ನೆಗಳನ್ನು ಸ್ಕ್ಯಾನ್ ಮಾಡಿ ನಕಲು ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಶಿಗ್ಗಾಂವಿಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ವೇಳೆ ಶಂಕರ್ ಬನ್ನೂರು ಮೊಬೈಲ್ ಬಳಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಅಧಿಕೃತವಾಗಿ ದೃಢಪಟ್ಟಿದೆ.
ಈ ಹಿಂದೆ ನಡೆದ ಕೆಎಸ್ಆರ್ಪಿ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕಗಳನ್ನು ಪಡೆದಿದ್ದ ಶಂಕರ್, VAO ಪರೀಕ್ಷೆಯಲ್ಲಿ ಏಕಾಏಕಿ 151.25 ಅಂಕಗಳನ್ನು ಗಳಿಸಿ ಟಾಪರ್ ಆಗಿದ್ದ. ಇದು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅನುಮಾನಕ್ಕೆ ಹಾಗೂ ಚರ್ಚೆಗೆ ಗ್ರಾಸವಾಗಿತ್ತು.
ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು, ಶಂಕರ್ ಬನ್ನೂರು ಅವರನ್ನು ವಶಕ್ಕೆ ಪಡೆದು ಶಿಗ್ಗಾಂವಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.























