ಒಂದೇ ಕುಟುಂಬದ 7 ಮಂದಿನ ಬರ್ಬರ ಹತ್ಯೆ: ಸರಣಿ ಕೊಲೆ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಹೇಗೆ?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿಯನ್ನು ರುಬ್ಬುಗುಂಡಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಶಂಕಾಸ್ಪದ ಸರಣಿ ಹತ್ಯಾಕಾಂಡ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ ಎಂಬ ಕ್ಯಾಬ್ ಚಾಲಕನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರ ಮೂಲದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ 7 ವರ್ಷದ ಮೊಮ್ಮಗ ಪುನೀತ್ ಕೊಲೆಯಾದ ದುರ್ದೈವಿಗಳು. ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಆರೋಪಿ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗೆ ಸದಾ ಸಂಪರ್ಕದಲ್ಲಿದ್ದುದನ್ನು ಹಾಗೂ ಜಗಳವಾದಾಗ ಆಕೆಯ ಕುಟುಂಬಸ್ಥರು ಆಕೆಗೆ ಬೆಂಬಲ ನೀಡುತ್ತಿದ್ದುದನ್ನು ಸಹಿಸದೇ ಕೊಲೆಗೆ ಸಂಚು ರೂಪಿಸಿದ್ದನು ಎನ್ನಲಾಗಿದೆ.
ಮೊದಲು ತನ್ನ ಮನೆಯಲ್ಲೇ ಪತ್ನಿ ಸುನೀತಾಳನ್ನು ರುಬ್ಬುಗುಂಡಿನಿಂದ ಜಜ್ಜಿ ಕೊಂದಿದ್ದನು. ನಂತರ ಕುಟುಂಬದವರಿಗೆ ಅನುಮಾನ ಬಾರದಂತೆ ಸುನೀತಾ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ನಂಬಿಸಿದ್ದನು.
ಬಳಿಕ ಮದ್ಯಪಾನ ಹಾಗೂ ಪಾರ್ಟಿಯ ನೆಪವೊಡ್ಡಿ ಕಳೆದ 15–20 ದಿನಗಳಲ್ಲಿ ಬಾಮೈದರಾದ ಶಿವಕುಮಾರ್, ಶಂಕರ್, ಅವರ ಪತ್ನಿಯರಾದ ನಳಿನಿ, ದಿವ್ಯಾ, ಅತ್ತೆ ರೂಪವತಿ ಮತ್ತು ಬಾಲಕ ಪುನೀತ್ ನನ್ನು ತನ್ನ ಮನೆಗೆ ಕರೆಸಿಕೊಂಡು ಸರಣಿ ಕೊಲೆ ಎಸಗಿದ್ದಾನೆ.
ಕೊಲೆಯಾದ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಬಿಸಾಡಿ ಪರಾರಿಯಾಗಲು ಯತ್ನಿಸಿದ್ದ. ರಕ್ತದ ಕಲೆಗಳನ್ನು ರಾಸಾಯನಿಕ ಬಳಸಿ ತೊಳೆದು, ರುಬ್ಬುಗುಂಡು ಹಾಗೂ ಮೃತದೇಹ ಸಾಗಿಸಿದ ಕಾರನ್ನು ಸಿದ್ಧವಾಗಿಟ್ಟುಕೊಂಡಿದ್ದನು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕುಟುಂಬದ ಸದಸ್ಯೆ ನಳಿನಿ ನಿಗೂಢವಾಗಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ವೇಳೆ ಇಂದುಶೇಖರ್ ನೀಡಿದ ಗೊಂದಲಕಾರಿ ಉತ್ತರಗಳಿಂದ ಅನುಮಾನಗೊಂಡ ಪೊಲೀಸರು ಆತನ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಕೊಲೆಯ ಸುಳಿವುಗಳು ಸಿಕ್ಕಿವೆ. ತೀವ್ರ ವಿಚಾರಣೆ ನಡೆಸಿದಾಗ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಗುರುವಾರ ಆರೋಪಿಯನ್ನು ನಂದಿ ಬೆಟ್ಟಕ್ಕೆ ಕರೆದೊಯ್ದು ನಾಲ್ಕು ಗಂಟೆಗಳ ಕಾಲ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಾಲಕ ಪುನೀತ್ ನ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಉಳಿದ ಶವಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ
ಸಾಮೂಹಿಕ ಹತ್ಯೆಯ ಗಂಭೀರತೆಯನ್ನು ಪರಿಗಣಿಸಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ರಾಜಾಜಿನಗರ ಠಾಣೆಯಲ್ಲೇ ಮೊಕ್ಕಾಂ ಹೂಡಿದ್ದಾರೆ. ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಸಾಕ್ಷ್ಯ ಸಂಗ್ರಹ ತೀವ್ರಗೊಳಿಸಲಾಗಿದೆ.
























