ಮಡಿಕೇರಿ ಬೆನ್ನಲ್ಲೇ ಕಾಫಿನಾಡಲ್ಲೂ ಪ್ರವಾಸಕ್ಕೆ ಬಂದಿದ್ದ ಬಾಲಕಿ ನಾಪತ್ತೆ:  ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬಾಲಕಿ ನಾಪತ್ತೆ

nandana
08/04/2026

ಚಿಕ್ಕಮಗಳೂರು: ಕೊಡಗಿನ ಮಡಿಕೇರಿಯಲ್ಲಿ ಪ್ರವಾಸಿ ಯುವತಿ ನಾಪತ್ತೆಯಾಗಿ ಸಿಕ್ಕ ಬೆನ್ನಲ್ಲೇ, ಈಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಂತಹದ್ದೇ ಮತ್ತೊಂದು ನಿಗೂಢ ಪ್ರಕರಣ ವರದಿಯಾಗಿದೆ. ಜಿಲ್ಲೆಯ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.

ಕೇರಳದ ಪಾಲಕ್ಕಾಡ್ ಮೂಲದ ನಂದನಾ (14) ನಾಪತ್ತೆಯಾದ ಬಾಲಕಿ. ಈಕೆ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.  ಸುಮಾರು 40 ಜನರ ತಂಡದೊಂದಿಗೆ ಕುಟುಂಬ ಸದಸ್ಯರೊಡಗೂಡಿ ಕೇರಳದಿಂದ ಚಿಕ್ಕಮಗಳೂರು ಪ್ರವಾಸಕ್ಕೆ ಈಕೆ ಆಗಮಿಸಿದ್ದಳು. ಚಂದ್ರದ್ರೋಣ ಪರ್ವತದ ಸುಂದರ ತಾಣಗಳನ್ನು ವೀಕ್ಷಿಸುವಾಗ ನಂದನಾ ಆಕಸ್ಮಿಕವಾಗಿ ತಂಡದಿಂದ ಬೇರ್ಪಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳದವರು ಸ್ಥಳೀಯರ ನೆರವಿನೊಂದಿಗೆ ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ದಟ್ಟ ಅರಣ್ಯ ಮತ್ತು ಕಡಿದಾದ ಬೆಟ್ಟ–ಗುಡ್ಡಗಳಿಂದ ಕೂಡಿದ ಪ್ರದೇಶವಾದ್ದರಿಂದ, ಬಾಲಕಿಯ ಸುಳಿವು ಪತ್ತೆಹಚ್ಚಲು ಅರಣ್ಯ ಇಲಾಖೆ ಈಗ ಡ್ರೋನ್ ಕ್ಯಾಮೆರಾಗಳ ಮೊರೆ ಹೋಗಿದೆ.

ನಿನ್ನೆ ರಾತ್ರಿ ಸುಮಾರು 1 ಗಂಟೆಯವರೆಗೂ 30ಕ್ಕೂ ಹೆಚ್ಚು ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು. ಆದರೆ, ಭಾರೀ ಮಂಜು ಮತ್ತು ದಟ್ಟ ಕತ್ತಲೆಯಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯುಂಟಾದ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಸ್ಥಳಕ್ಕೆ ಎಸ್‌ ಪಿ ಭೇಟಿ:

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಿಗ್ಗೆಯಿಂದಲೇ ಶೋಧ ಕಾರ್ಯ ಮತ್ತೆ ಚುರುಕುಗೊಂಡಿದೆ.

ಮಡಿಕೇರಿಯಲ್ಲಿ ಇತ್ತೀಚೆಗಷ್ಟೇ ನಡೆದ ಇಂತಹುದೇ ಘಟನೆ ಸುಖಾಂತ್ಯ ಕಂಡಿತ್ತು. ಅದೇ ರೀತಿ ನಂದನಾ ಕೂಡ ಸುರಕ್ಷಿತವಾಗಿ ಸಿಗಲಿ ಎಂದು ಕುಟುಂಬಸ್ಥರು ಮತ್ತು ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version