2:06 PM Wednesday 17 - December 2025

ಬಾಯಿಗೆ ಬಿದ್ದ ಎಲೆ ಉಗುಳಿದ್ದಕ್ಕೆ ಬ್ರಿಟನ್ ವ್ಯಕ್ತಿಗೆ 30 ಸಾವಿರ ರೂ. ದಂಡ!

roy marsh
17/12/2025

ಲಂಡನ್: ಅಚಾನಕ್ ಆಗಿ ನಡೆದ ಘಟನೆಯೊಂದು ವೃದ್ಧರೊಬ್ಬರಿಗೆ ಭಾರೀ ಮೊತ್ತದ ದಂಡ ವಿಧಿಸುವಂತೆ ಮಾಡಿದೆ. ಬಲವಾದ ಗಾಳಿ ಬೀಸುತ್ತಿದ್ದಾಗ ಬಾಯಿಗೆ ಹಾರಿಬಂದ ಎಲೆಯನ್ನು ಉಗುಳಿದ್ದಕ್ಕಾಗಿ ಬ್ರಿಟನ್‌ನ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 30,000 ರೂಪಾಯಿ (250 ಪೌಂಡ್) ದಂಡ ವಿಧಿಸಲಾಗಿದೆ.

ಏನಿದು ಘಟನೆ?: ಇಂಗ್ಲೆಂಡ್‌ ನ ಲಿಂಕನ್‌ ಶೈರ್‌ ನ ಸ್ಕೆಗ್ನೆಸ್ ಎಂಬಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ರಾಯ್ ಮಾರ್ಷ್ ಎಂಬ ವೃದ್ಧರು ಬೋಯಿಟಿಂಗ್ ಸರೋವರದ ಬಳಿ ಎಂದಿನಂತೆ ವಾಕಿಂಗ್ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಮಯದಲ್ಲಿ ಜೋರಾದ ಗಾಳಿ ಬೀಸಿದ್ದರಿಂದ ದೊಡ್ಡದಾದ ಎಲೆಯೊಂದು ನೇರವಾಗಿ ಅವರ ಬಾಯಿಗೆ ಬಿದ್ದಿದೆ. ತಕ್ಷಣಕ್ಕೆ ಪ್ರತಿಕ್ರಿಯಿಸಿದ ರಾಯ್, ಆ ಎಲೆಯನ್ನು ಕೆಳಗೆ ಉಗುಳಿದ್ದಾರೆ.

ದುರದೃಷ್ಟವಶಾತ್, ಅಲ್ಲೇ ಇದ್ದ ಇಬ್ಬರು ಅಧಿಕಾರಿಗಳು ಇದನ್ನು ಗಮನಿಸಿ, ಸಾರ್ವಜನಿಕ ಸ್ಥಳದಲ್ಲಿ ಉಗುಳುವ ಮೂಲಕ ಗಲೀಜು ಮಾಡಿದ್ದಾರೆ ಎಂದು ರಾಯ್ ಅವರಿಗೆ 250 ಪೌಂಡ್‌ ಗಳ ದಂಡದ ನೋಟಿಸ್ ನೀಡಿದ್ದಾರೆ. ಅಧಿಕಾರಿಗಳಲ್ಲಿ ಒಬ್ಬರು ರಾಯ್ ಅವರನ್ನು ನಿಂದಿಸಿದ್ದಾರೆ ಎಂದು ಕೂಡ ವರದಿಯಾಗಿದೆ.

ಕುಟುಂಬದ ಆಕ್ರೋಶ: ರಾಯ್ ಅವರ ಮಗಳಾದ ಜೇನ್ ಮಾರ್ಷ್ ಫಿಟ್ಜ್‌ಪ್ಯಾಟ್ರಿಕ್ ಈ ಬಗ್ಗೆ ಫೇಸ್‌ ಬುಕ್‌ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನನ್ನ ತಂದೆ ತೀವ್ರ ಆಸ್ತಮಾ ಮತ್ತು ಹೃದ್ರೋಗದಿಂದ ಬಳಲುತ್ತಿದ್ದಾರೆ. ಅವರಿಗೆ ಸರಿಯಾಗಿ ನಡೆಯಲು ಕೂಡ ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಅವರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ನಗರವನ್ನು ಸ್ವಚ್ಛವಾಗಿಡುವುದು ಮುಖ್ಯ ನಿಜ, ಆದರೆ ಉದ್ದೇಶಪೂರ್ವಕವಲ್ಲದ ಕೃತ್ಯಕ್ಕೆ ಇಷ್ಟೊಂದು ದೊಡ್ಡ ಮೊತ್ತದ ದಂಡ ವಿಧಿಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version