ಪ್ರೀತಿಸಿದವನಿಗಾಗಿ ವಿಲನ್ ಆದ ವಧು: ವರನಿಗೆ ಚೂರಿ ಇರಿತ ಪ್ರಕರಣಕ್ಕೆ ಟ್ವಿಸ್ಟ್
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲದಲ್ಲಿ ಮದುವೆಗೆ ಸಜ್ಜಾಗಿದ್ದ ವರನ ಮೇಲೆ ನಡೆದಿದ್ದ ಚಾಕು ಇರಿತ ಪ್ರಕರಣ ಇದೀಗ ಸಿನಿಮೀಯ ತಿರುವು ಪಡೆದುಕೊಂಡಿದೆ. ವರನ ಕೊಲೆಗೆ ಸಂಚು ರೂಪಿಸಿ ಸುಪಾರಿ ನೀಡಿದ್ದ ಸೂತ್ರಧಾರಿ ಬೇರೆ ಯಾರೂ ಅಲ್ಲ, ಸ್ವತಃ ಮದುವೆಯಾಗಬೇಕಿದ್ದ ವಧು ನಯನಾ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಪ್ರಕರಣದ ಹಿನ್ನೆಲೆ: ಕಳೆದ ಡಿಸೆಂಬರ್ 30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನಾ ಅವರ ವಿವಾಹ ನಿಶ್ಚಯವಾಗಿತ್ತು. ಮದುವೆಯ ಹಿಂದಿನ ದಿನ ಆರತಕ್ಷತೆಗಾಗಿ ವರ ರವೀಶ್ ತನ್ನ ಸಂಬಂಧಿಕರೊಂದಿಗೆ ಕಾರಿನಲ್ಲಿ ಕೊಳ್ಳೇಗಾಲದ ವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ರವೀಶ್ ಅವರ ಕಾರನ್ನು ಅಡ್ಡಗಟ್ಟಿ, ಗಲಾಟೆ ಮಾಡಿ ಅವರಿಗೆ ಚಾಕು ಇರಿದು ಪರಾರಿಯಾಗಿತ್ತು. ಅದೃಷ್ಟವಶಾತ್ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ: ಘಟನೆಯ ನಂತರ ಮದುವೆ ರದ್ದಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ರವೀಶ್‌ನನ್ನು ನೋಡಲು ಬಂದಿದ್ದ ನಯನಾ, ತನಗೇನೂ ತಿಳಿಯದವಳಂತೆ ಕಣ್ಣೀರಿಟ್ಟು ನಾಟಕವಾಡಿದ್ದಳು. ಆದರೆ ಪೊಲೀಸರು ನಯನಾಳ ಮೊಬೈಲ್ ಕರೆಗಳ ವಿವರ (CDR) ಪರಿಶೀಲಿಸಿದಾಗ ಆಕೆಯ ಸಂಚು ಬಯಲಾಗಿದೆ.
ನಯನಾ ಕಳೆದ ಎರಡು ವರ್ಷಗಳಿಂದ ದರ್ಶನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮನೆಯವರ ಒತ್ತಾಯಕ್ಕೆ ಮಣಿದು ರವೀಶ್ ಜೊತೆ ಮದುವೆಗೆ ಒಪ್ಪಿದ್ದರೂ, ಹೇಗಾದರೂ ಮಾಡಿ ಮದುವೆ ನಿಲ್ಲಿಸಲು ಸಂಚು ರೂಪಿಸಿದ್ದಳು. ಇದಕ್ಕಾಗಿ ತನ್ನ ಪ್ರಿಯಕರ ದರ್ಶನ್ ಜೊತೆ ಸೇರಿ ರವೀಶ್‌ನನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದಳು. ತನ್ನ ತಂಗಿಯ ಮೊಬೈಲ್ ಬಳಸಿ ಪ್ರಿಯಕರನಿಗೆ ಕರೆ ಮಾಡಿ ಈ ಕೃತ್ಯಕ್ಕೆ ಪ್ರೇರೇಪಿಸಿದ್ದಳು ಎನ್ನಲಾಗಿದೆ.
ಆರೋಪಿಗಳ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ವಧು ನಯನಾ, ಆಕೆಯ ಪ್ರಿಯಕರ ದರ್ಶನ್ ಮತ್ತು ಸಹಚರ ಮಿಥುನ್ ನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD






















