ಶಕ್ತಿ ಯೋಜನೆ: ಇನ್ನು ಮುಂದೆ ಆಧಾರ್ ಕಾರ್ಡ್ ತೋರಿಸುವಂತಿಲ್ಲ: ಬದಲಿ ವ್ಯವಸ್ಥೆ ಏನು?

shakti yojana
13/02/2026

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ಮುಂದೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್ ತೋರಿಸುವಂತಿಲ್ಲ, ಬದಲಿಗೆ ಸರ್ಕಾರ ನೀಡುವ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಅನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಯೋಜನೆಯಲ್ಲಿ ಪಾರದರ್ಶಕತೆ ತರಲು ಮತ್ತು ಫಲಾನುಭವಿಗಳ ನಿಖರ ಮಾಹಿತಿ ಪಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ತೀರ್ಮಾನಗಳು:

ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ಇದುವರೆಗೆ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುತ್ತಿದ್ದ ವ್ಯವಸ್ಥೆಗೆ ಶೀಘ್ರದಲ್ಲೇ ತೆರೆ ಬೀಳಲಿದೆ.

ರೇಸ್ ಕೋರ್ಸ್ ಸ್ಥಳಾಂತರ: ಬೆಂಗಳೂರಿನ ಹೃದಯಭಾಗದಲ್ಲಿರುವ ರೇಸ್ ಕೋರ್ಸ್ (ಟರ್ಫ್ ಕ್ಲಬ್) ಅನ್ನು ತುಮಕೂರು ಜಿಲ್ಲೆಯ ಕುಣಿಗಲ್‌ಗೆ ಸ್ಥಳಾಂತರಿಸಲು ಸಂಪುಟ ಒಪ್ಪಿಗೆ ನೀಡಿದೆ. ರೇಸ್ ಕೋರ್ಸ್‌ನ ಲೀಸ್ ಅವಧಿ ಮುಕ್ತಾಯಗೊಂಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಶಾಲಾ ಮಕ್ಕಳಿಗೆ ಉಚಿತ ಶೂ–ಸಾಕ್ಸ್: ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನಲ್ಲಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡಲು ಅನುಮೋದನೆ ನೀಡಲಾಗಿದೆ.

ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ: ಬಳ್ಳಾರಿಯ ವಿಮ್ಸ್ (VIMS) ಆವರಣದಲ್ಲಿ 200 ಬೆಡ್‌ಗಳ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ.

ವಿಶೇಷ ಕೃಷಿ ವಲಯ: ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಸುಮಾರು 1777 ಎಕರೆ ಜಮೀನನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸಲಾಗಿದೆ.

ದ್ರಾಕ್ಷಾರಸ ಶೀತಲೀಕರಣ ಘಟಕ: ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ದ್ರಾಕ್ಷಾರಸ ಶೀತಲೀಕರಣ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಿಸುವುದರಿಂದ ಸಾರಿಗೆ ನಿಗಮಗಳಿಗೆ ಉಂಟಾಗುವ ಆರ್ಥಿಕ ಹೊರೆ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ನಿಖರವಾಗಿ ಲೆಕ್ಕಹಾಕಲು ಸರ್ಕಾರಕ್ಕೆ ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version