ರಾತ್ರಿ ಬೆಳಗಾಗುವುದರೊಳಗೆ ನಾಗಿಣಿಯಾದ ಯುವತಿ: ಹಾವಿನ ಪೊರೆ ಕಳಚಿಟ್ಟು ಮಾಯವಾದ ಯುವತಿ: ಅಸಲಿ ಮ್ಯಾಟ್ರೂ ಇನ್ನೂ ಇದೆ ಓದಿ…
ಔರೈಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಸಿಂಗನ್ ಪುರ್ ಎಂಬ ಗ್ರಾಮದಲ್ಲಿ 20 ವರ್ಷದ ಯುವತಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವುದು ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಯುವತಿ ಮಲಗಿದ್ದ ಜಾಗದಲ್ಲಿ 5 ಅಡಿ ಉದ್ದದ ಹಾವಿನ ಪೊರೆ ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ದಿಗಿಲು ಹುಟ್ಟಿಸಿದ್ದು, ಯುವತಿಯೇ ‘ಇಚ್ಛಾಧಾರಿ ನಾಗಿಣಿ’ಯಾಗಿ ಬದಲಾಗಿದ್ದಾಳೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿವೆ.
ಏನಿದು ಘಟನೆ?
ಭಾನುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಸೋಮವಾರ ಬೆಳಿಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದಳು. ಆದರೆ ಅಚ್ಚರಿಯೆಂದರೆ, ಆಕೆ ಧರಿಸಿದ್ದ ಬಟ್ಟೆಗಳು ಮತ್ತು ಆಭರಣಗಳು ಹಾಸಿಗೆಯ ಮೇಲೆ ಅಚ್ಚುಕಟ್ಟಾಗಿ ಇರಿಸಲ್ಪಟ್ಟಿದ್ದವು. ಅದರ ಪಕ್ಕದಲ್ಲೇ 5 ಅಡಿ ಉದ್ದದ ಹಾವಿನ ಪೊರೆಯೊಂದು ಪತ್ತೆಯಾಗಿತ್ತು. ಇದನ್ನು ಕಂಡ ಪೋಷಕರು ಮತ್ತು ಗ್ರಾಮಸ್ಥರು ಆಕೆ ರೂಪಾಂತರಿ ನಾಗಿಣಿಯಾಗಿ ಹಾವಿನ ಬಿಲದ ಮೂಲಕ ಹೊರಟು ಹೋಗಿದ್ದಾಳೆ ಎಂದು ನಂಬಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಈ ವಿಡಿಯೋಗಳು ವೈರಲ್ ಆಗಿ ‘ನಿಜ ಜೀವನದ ನಾಗಿಣಿ’ ಎಂದು ಜನರು ಕಮೆಂಟ್ ಮಾಡತೊಡಗಿದ್ದರು.
ಪೊಲೀಸ್ ತನಿಖೆಯಲ್ಲಿ ಬಯಲಾದ ಅಸಲಿ ಸತ್ಯ:
ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಪೊಲೀಸರ ಪ್ರಕಾರ, ಇದು ಕೇವಲ ಒಂದು ಯೋಜಿತ ನಾಟಕ. ಯುವತಿಯು ಅದೇ ಗ್ರಾಮದ ಓರ್ವ ಯುವಕನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗಷ್ಟೇ ಮನೆಯವರು ಆಕೆಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯಿಸಿದ್ದರು. ಮದುವೆಯಿಂದ ತಪ್ಪಿಸಿಕೊಳ್ಳಲು ಮತ್ತು ಮನೆಯವರ ದಿಕ್ಕು ತಪ್ಪಿಸಲು ಯುವತಿ ಈ ‘ನಾಗಿಣಿ’ ನಾಟಕವಾಡಿದ್ದಾಳೆ. ತನಿಖೆ ವಿಳಂಬವಾಗಲಿ ಎಂಬ ಉದ್ದೇಶದಿಂದ ಹಾವಿನ ಪೊರೆಯನ್ನು ಹಾಸಿಗೆಯ ಮೇಲೆ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಪೊಲೀಸರು ಮನೆಯವರ ಮೊಬೈಲ್ ಕರೆಗಳ ದಾಖಲೆಗಳನ್ನು ಪರಿಶೀಲಿಸಿದಾಗ ಯುವತಿ ಮತ್ತು ಆಕೆಯ ಪ್ರಿಯಕರ ನಾಪತ್ತೆಯಾಗಿರುವುದು ದೃಢಪಟ್ಟಿದೆ.
“ಯುವತಿ ಹಾವಾಗಿ ಬದಲಾಗಿದ್ದಾಳೆ ಎಂಬುದು ಕೇವಲ ವದಂತಿ. ಜನರು ಇಂತಹ ಮೂಢನಂಬಿಕೆಗಳನ್ನು ನಂಬಬಾರದು. ಇದೊಂದು ಅಪಹರಣ ಅಥವಾ ಸ್ವಯಂಪ್ರೇರಿತವಾಗಿ ಓಡಿಹೋಗಿರುವ ಪ್ರಕರಣವಾಗಿದ್ದು, ಶೀಘ್ರದಲ್ಲೇ ಯುವತಿಯನ್ನು ಪತ್ತೆ ಮಾಡುತ್ತೇವೆ” ಎಂದು ಅಜಿತ್‌ಮಲ್ ವೃತ್ತದ ಪೊಲೀಸ್ ಅಧಿಕಾರಿ ಮನೋಜ್ ಗಂಗ್ವಾರ್ ತಿಳಿಸಿದ್ದಾರೆ. ಪ್ರಸ್ತುತ ಪೊಲೀಸರು ಯುವತಿ ಮತ್ತು ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD






















