ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಕುಟುಂಬಸ್ಥರಿಂದಲೇ ಯುವತಿಯ ಹತ್ಯೆ!

ಕಲಬುರಗಿ: ಬೇರೆ ಜಾತಿಯ ಯುವಕನನ್ನು ಪ್ರೀತಿಸಿದಳು ಎನ್ನುವ ಕಾರಣಕ್ಕೆ ತಂದೆ ಹಾಗೂ ಕುಟುಂಬಸ್ಥರು ಸೇರಿ ಯುವತಿಯನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿಯ ಮೇಳಕುಂದಾ (ಬಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕವಿತಾ ಕೊಳ್ಳೂರ (18) ತನ್ನ ಕುಟುಂಬಸ್ಥರಿಂದಲೇ ಹತ್ಯೆಯಾದ ದುರ್ದೈವಿಯಾಗಿದ್ದಾಳೆ.
ಕವಿತಾಳ ತಂದೆ ಶಂಕರ ಕೊಳ್ಳೂರ ಹಾಗೂ ಸಂಬಂಧಿಗಳಾದ ಶರಣು, ದತ್ತು ಚೋಳಾಭರ್ಧಿ ಹತ್ಯೆ ನಡೆಸಿದ ಆರೋಪಿಗಳಾಗಿದ್ದಾರೆ. ಘಟನೆ ಸಂಬಂಧ ಫರಹತಾಬಾದ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕವಿತಾ ಅದೇ ಗ್ರಾಮದ ಬೇರೆ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದಳು. ಪಿಯುಸಿ ಓದುತ್ತಿದ್ದ ವೇಳೆ ಕವಿತಾಗೆ ಯುವಕನ ಪರಿಚಯವಾಗಿತ್ತು. ಇವರ ಪ್ರೀತಿ ವಿಚಾರ ಮನೆಯಲ್ಲಿ ತಿಳಿದ ನಂತರ ಆಕೆಯನ್ನು ಬಲವಂತವಾಗಿ ಕಾಲೇಜು ಬಿಡಿಸಿದ್ದರು. ಆದ್ರೆ ಪ್ರೀತಿಸಿದ ಯುವಕನ ಜೊತೆಗೆ ವಿವಾಹ ಮಾಡುವಂತೆ ಕವಿತಾ ಪಟ್ಟು ಹಿಡಿದಿದ್ದಳು.
ಬೇರೆ ಜಾತಿಯ ಯುವಕನ ಜೊತೆಗೆ ಪ್ರೀತಿಸುವುದನ್ನು, ಮದುವೆಯಾಗುವುದನ್ನು ಸಹಿಸದೇ ಮಧ್ಯರಾತ್ರಿ ಕವಿತಾಳ ಕತ್ತು ಹಿಸುಕಿ ಮನೆಯವರೇ ಹತ್ಯೆ ನಡೆಸಿದ್ದು, ಬಳಿಕ ಕೀಟನಾಶಕ ಸುರಿದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದರು. ಬೆಳಗ್ಗೆ ಗ್ರಾಮದ ಹೊರವಲಯದ ಜಮೀನಿಗೆ ದೇಹವನ್ನು ಕೊಂಡೊಯ್ದು ಸುಟ್ಟು ಹಾಕಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಸದ್ಯ ಪೊಲೀಸರು ಅವಶೇಷಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಘಟನೆಯ ಬೆನ್ನಲ್ಲೇ ಪೋಷಕರ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD