3:48 PM Sunday 28 - September 2025

ನಟ ವಿಜಯ್ ರ್‍ಯಾಲಿಯಲ್ಲಿ ದುರಂತ: ಪೊಲೀಸರ ಮಾರ್ಗಸೂಚಿ ಉಲ್ಲಂಘಿಸಿಲ್ಲ, ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಣೆ

vijay
28/09/2025

ಚೆನ್ನೈ: ನಟ, ಟಿವಿಕೆ ಪಕ್ಷದ ನಾಯಕ ವಿಜಯ್(Actor Vijay )ಅವರ ರಾಜಕೀಯ ರ್‍ಯಾಲಿಯಲ್ಲಿ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯ ಬೆನ್ನಲ್ಲೇ ನಟ ವಿಜಯ್ ಅವರ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.

ಮುಂದಿನ ವರ್ಷ ತಮಿಳುನಾಡು ವಿಧಾನ ಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಲು ಟಿವಿಗೆ ಸಜ್ಜಾಗಿದೆ. ಈ ನಡುವೆ ವಿಜಯ್ ಅವರ ಭಾರೀ ಜನಪ್ರಿಯತೆ ಟಿವಿಕೆ ಪಕ್ಷಕ್ಕೆ ಭಾರೀ ಬಲವನ್ನು ನೀಡಿದೆ. ಈ ನಡುವೆ  ಟಿವಿಕೆ ಪಕ್ಷದ ರ್‍ಯಾಲಿಯಲ್ಲಿ ಭಾರೀ ಅವಘಡ ನಡೆದಿದ್ದು, ವಿಪಕ್ಷಗಳು ವಿಜಯ್ ಅವರನ್ನು ಗುರಿಯಾಗಿಸಿ ತೀವ್ರ ಟೀಕೆ ಮಾಡಿದೆ. ಆದರೆ ತಮಿಳುನಾಡು ಸರ್ಕಾರ ಸರಿಯಾದ ಸುರಕ್ಷತಾ ಕ್ರಮವನ್ನು ಕೈಗೊಳ್ಳದ ಹಿನ್ನೆಲೆ ಈ ಘಟನೆ ನಡೆದಿದೆ ಎನ್ನುವ ಆರೋಪಗಳು ಕೂಡ ವ್ಯಾಪಕವಾಗಿ ಕೇಳಿ ಬಂದಿದೆ.

vijay

ಡಿಎಂಕೆ ನೇತೃತ್ವದ ತಮಿಳುನಾಡು ರಾಜ್ಯ ಸರ್ಕಾರ ನಟ ವಿಜಯ್  ರ್‍ಯಾಲಿಯಲ್ಲಿ ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಆಯೋಜಕರು ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲ, ಇದರಿಂದಾಗಿ ಜನರು ಮೂರ್ಛೆ ಹೋಗಿದ್ದಾರೆ ಎಂದು ಆರೋಪಿಸಿದೆ. ಸಂಜೆ ಆಯೋಜನೆ ಗೊಂಡಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನದಿಂದಲೇ ಜನರು ಜಮಾಯಿಸಿದ್ದರು. ವಿಜಯ್ 7 ಗಂಟೆಗೆ ಆಗಮಿಸಿದರು ಮತ್ತು ಪೊಲೀಸರು ನೀಡಿರುವ ಮಾರ್ಗಸೂಚಿಗಳನ್ನು ವಿಜಯ್ ಅನುಸರಿಸಿಲ್ಲ ಎಂದು ಆರೋಪಿಸಿದೆ. ವಿಜಯ್ ಮಾತನಾಡುತ್ತಿರುವಾಗಲೂ ಕೆಲವರು ಕುಸಿದು ಬಿದ್ದರು. ಆದರೆ ವಿಜಯ್ ಭಾಷಣ ಮುಂದುವರಿಸಿದ್ದರು. ಆ್ಯಂಬುಲೆನ್ಸ್ ಗಳು ಸ್ಥಳಕ್ಕೆ ತಲುಪಲು ಅವಕಾಶ ನೀಡಲಿಲ್ಲ, ಕಾರ್ಯಕ್ರಮದ ನಂತರ ವಿಜಯ್ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿ, ಖಾಸಗಿ ವಿಮಾನದ ಮೂಲಕ ಚೆನ್ನೈಗೆ ಹಾರಿದ್ದಾರೆ ಎನ್ನುವುದು ಸರ್ಕಾರದ ಆರೋಪವಾಗಿದೆ.

ಸರ್ಕಾರದ ಆರೋಪವನ್ನು ಟಿವಿಕೆ ಪಕ್ಷದ ವಕೀಲರು ತಳ್ಳಿಹಾಕಿದ್ದಾರೆ.  ಪಕ್ಷವು ಪೊಲೀಸರು ನೀಡಿರುವ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದೆ, ಆದರೂ ದುರಂತ ನಡೆದಿದೆ ಮತ್ತು ಈ ದುರಂತ ವಿಜಯ್ ಅವರನ್ನು ತೀವ್ರವಾಗಿ ಬಾಧಿಸಿದೆ. ಅವರು ತಮಿಳುನಾಡಿನ ಜನರನ್ನು ಬಹಳ ಪ್ರೀತಿಸುತ್ತಾರೆ. ದುರಂತ ನಡೆದ ವೇಳೆ ವಿಜಯ್ ಭಾಷಣ ಮುಂದುವರಿಸಲಿಲ್ಲ, ಸ್ಥಳದಲ್ಲೇ ಜನರಿಗೆ ವಿಜಯ್ ನೀರಿನ ಬಾಟಲಿಗಳನ್ನು ಹಸ್ತಾಂತರಿಸಿದ್ದರು, ಆ ದೃಶ್ಯಗಳು ಕ್ಯಾಮರಾಗಳಲ್ಲಿಯೂ ಸೆರೆಯಾಗಿದೆ ಎಂದಿದ್ದಾರೆ.

20 ಲಕ್ಷ ಪರಿಹಾರ ಘೋಷಿಸಿದ ವಿಜಯ್:

vijay

ಟಿವಿಕೆ ಪಕ್ಷದ ಸಮಾವೇಶದ ವೇಳೆ ಕಾಲ್ತುಳಿತಕ್ಕೆ  ಬಲಿಯಾದವರ ಕುಟುಂಬಕ್ಕೆ ಪಕ್ಷದ ವತಿಯಿಂದ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ವಿಜಯ್ ಘೋಷಣೆ ಮಾಡಿದ್ದಾರೆ.  ನಮಗೆ ಇದು ತುಂಬಲಾರದ ನಷ್ಟ, ಯಾರು ಸಾಂತ್ವನದ ಮಾತುಗಳನ್ನಾಡಿದರೂ ನಮ್ಮ ಪ್ರೀತಿ ಪಾತ್ರರ ನಷ್ಟವು ಅಸಹನೀಯವಾದದ್ದು. ಆದರೂ ನಿಮ್ಮ ಕುಟುಂಬದ ಸದಸ್ಯನಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಕುಟುಂಬಕ್ಕೆ 20 ಲಕ್ಷ ರೂ. ಹಾಗೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ 2 ಲಕ್ಷ ರೂ. ಪರಿಹಾರ ನೀಡಲು ನಾನು ನಿರ್ಧರಿಸಿದ್ದೇನೆ. ಇಂತಹ ಸಂದರ್ಭದಲ್ಲಿ ಈ ಮೊತ್ತ ಏನೂ ಅಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯ ಎಂದು ವಿಜಯ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version