ರೋಡ್ ಅಲ್ಲ, ರೋಡ್ ಥರ…! | ಪೂರ್ಣಗೊಂಡ ಕೆಲ ತಿಂಗಳೊಳಗೆ ಕಿತ್ತು ಬಂದ ಕಾಂಕ್ರೀಟ್ ರಸ್ತೆ: ಗ್ರಾಮಸ್ಥರಿಂದ ಆಕ್ರೋಶ

road
16/11/2025

ಕೊಟ್ಟಿಗೆಹಾರ: ಬಣಕಲ್ ಗುಡ್ಡಟ್ಟಿ ರಸ್ತೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡ ಕೆಲ ತಿಂಗಳೊಳಗೆ ಕಿತ್ತು ಬಂದಿದ್ದು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಇಲ್ಲದಿದ್ದರೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಎಂದು ಕುವೆಂಪು ನಗರ ಗುಡ್ಡಟ್ಟಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.

ಸ್ಥಳಕ್ಕೆ ಭೇಟಿ ನೀಡಿದ ಪಿಡಬ್ಲೂಡಿ ಇಂಜಿನಿಯರ್ ನಂಜುಂಡಯ್ಯ ಅವರನ್ನು ಗ್ರಾಮಸ್ಥರು ರಸ್ತೆ ಕಳಪೆ ಕಾಮಗಾರಿ ಬಗ್ಗೆ ತರಾಟೆಗೆ ತೆಗೆದು ಕೊಂಡರು.

ಗುಡ್ಡಟ್ಟಿ ಗ್ರಾಮಸ್ಥ ಅರುಣ್ ಪೂಜಾರಿ ಮಾತನಾಡಿ, ಶಾಸಕರ ಅನುದಾನದಲ್ಲಿ ಗುತ್ತಿಗೆದಾರರಾದ ಮರೇಬೈಲು ಮನು ಎಂಬುವವರು ಕಾಂಕ್ರೀಟ್ ರಸ್ತೆಯನ್ನು 2022 ಏಪ್ರಿಲ್ ತಿಂಗಳಲ್ಲಿ ನಿರ್ಮಿಸಿದ್ದರು. ಕಳಪೆ ಕಾಮಗಾರಿ ಆದ ಕಾರಣ ಅದೇ ವರ್ಷದ ಮಳೆಗೆ ರಸ್ತೆ ಸಂಪೂರ್ಣ ಹಾಳಾಗಿತ್ತು. ಕೂಡಲೇ ಗುತ್ತಿಗೆದಾರರನ್ನು ಕರೆಸಿ ಸರಿಪಡಿಸಲು ಒತ್ತಾಯಿಸಿದ್ದೆವು. ಮಳೆ ಕಡಿಮೆಯಾದ ಕೂಡಲೆ ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಮೂರು ವರ್ಷ ಕಳೆದರೂ ರಸ್ತೆ ದುರಸ್ತಿ ಆಗದ ಕಾರಣ ಲೋಕಾಯುಕ್ತರ ಭೇಟಿಗೆ ಅನುಮತಿ ಕೇಳಿದ್ದೇವೆ. ರಸ್ತೆ ದುರಸ್ಥಿ ಆಗದೇ ಇದ್ದರೇ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದರು.

ಚುನಾವಣಾ ಹೊತ್ತಿನಲ್ಲಿ ಕಾಮಗಾರಿಗಳ ಗುಣಮಟ್ಟ ಯಾವ ರೀತಿ ಇರಲಿದೆ ಎಂಬುದಕ್ಕೇ ಗುಡ್ಡಹಟ್ಟಿ ರಸ್ತೆ ಒಂದು ನಿದರ್ಶನವಾಗಿದೆ. ಕಾಂಕ್ರಿಟ್ ಹಾಕಿದ ಕೆಲವೇ ತಿಂಗಳಲ್ಲಿ ರಸ್ತೆ ಕಿತ್ತು ಬಂದಿದೆ. ಕಡಿಮೆ ಸಿಮೆಂಟ್ ಮತ್ತು ಕಡಿಮೆ ಗುಣಮಟ್ಟದ ಡಸ್ಟ್ ರೀತಿಯ ಎಂಸ್ಯಾಂಡ್ ಬಳಕೆ ಮತ್ತು ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂಜಿನಿಯರ್ ನಂಜುಂಡಯ್ಯ ಮಾತನಾಡಿ 2026ರ ಜನವರಿ ಅಂತ್ಯದ ಒಳಗೆ ರಸ್ತೆ ದುರಸ್ತಿ ಮಾಡಿ ಕೊಡಲಾಗುವುದು ಎಂದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ಮಾತು ತಪ್ಪಿದರೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್‌ ಗೌಡ, ರಾಜಮ್ಮ, ಅರುಣ್ ಪೂಜಾರಿ, ಗ್ರಾ.ಪಂ. ಸದಸ್ಯರಾದ ಮಧುಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಆತಿಕಾ ಭಾನು, ರಿಯಾಜ್, ಪ್ರವೀಣ್ ಹೊರಟ್ಟಿ, ಕೃಷ್ಣ ಗುಡ್ಡಹಟ್ಟಿ, ಜಾವಿದ್, ಗುಡ್ಡಹಟ್ಟಿ, ಹೊರಟ್ಟಿ, ಕುವೆಂಪು ನಗರ ಗ್ರಾಮಸ್ಥರು ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version