ಕಠಿಣ ಕಾನೂನು: ಹಿಜಾಬ್ ಧರಿಸದ 12 ನಟಿಯರ ಮೇಲೆ ನಿಷೇಧ ಹೇರಿದ ಇರಾನ್..!

ಹಿಜಾಬ್ ಕಾನೂನನ್ನು ಉಲ್ಲಂಘಿಸಿದ ಆರೋಪ ಹೊತ್ತಿದ್ದ ಹನ್ನೆರಡು ನಟಿಯರಿಗೆ ಸಿನೆಮಾಗಳಲ್ಲಿ ನಟಿಸಲು ನಿರ್ಬಂಧ ವಿಧಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.
ಹಿಜಾಬ್ ಒಳಗೊಂಡ ವಸ್ತ್ರಸಂಹಿತೆಯನ್ನು ಅನುಸರಿಸಲು ವಿಫಲವಾದ ಕಾರಣಕ್ಕಾಗಿ 12 ನಟಿಯರ ಮೇಲೆ ನಿಷೇಧ ಹೇರಲಾಗಿದೆ ಎಂದು ಇರಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕಾನೂನನ್ನು ಅನುಸರಿಸದವರಿಗೆ ಕೆಲಸ ಮಾಡಲು ಅನುಮತಿಸಲಾಗುವುದಿಲ್ಲ” ಎಂದು ಇರಾನ್ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವ ಮಹಮ್ಮದ್ ಮೆಹದಿ ಎಸ್ಮಾಯಿಲಿ ತಿಳಿಸಿದ್ದಾರೆ.
ತರನೆಹ್ ಅಲಿದೋಸ್ಟಿ, ಕಟಾಯೂನ್ ರಿಯಾಹಿ ಮತ್ತು ಫತೇಮೆ ಮೊಟಮೆಡ್ ಸೇರಿದಂತೆ 12 ನಟಿಯರ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಗಳು ಹೇಳಿವೆ. ಕಳೆದ ವರ್ಷ ಹಿಜಾಬ್ ವಿರೋಧಿ ಹೋರಾಟಗಾರ್ತಿಯ ಕಸ್ಟಡಿ ಸಾವಿನೊಂದಿಗೆ ಆರಂಭವಾದ ಹಿಜಾಬ್ ವಿರೋಧಿ ಆಂದೋಲನಕ್ಕೆ ನಟಿಯರಾದ ಅಲಿದೂಸ್ಟಿ ಮತ್ತು ರಿಯಾಹಿ ಕೂಡಾ ಬೆಂಬಲ ವ್ಯಕ್ತಪಡಿಸಿದ್ದರು.
ಇರಾನ್ ನ 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ 1983 ರಿಂದ ಮಹಿಳೆಯರು ತಮ್ಮ ಕುತ್ತಿಗೆ ಮತ್ತು ತಲೆಯನ್ನು ಮುಚ್ಚಿಕೊಳ್ಳಬೇಕಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಹಿಜಾಬ್ ನಿರ್ಬಂಧಗಳನ್ನು ಉಲ್ಲಂಘಿಸುವ ಮಹಿಳೆಯರಿಗೆ ಮತ್ತು ಕಂಪನಿಗಳಿಗೆ ಇರಾನ್ ತನ್ನ ದಂಡವನ್ನು ಹೆಚ್ಚಿಸಿದೆ.